ಅಹಮದಾಬಾದ್: ಹೋಟೆಲ್ವೊಂದರಲ್ಲಿ 23 ವರ್ಷದ ಯುವತಿಯೊಬ್ಬಳು ತನ್ನ 26 ವರ್ಷದ ಗೆಳೆಯನೊಂದಿಗೆ ಸೆಕ್ಸ್ ಮಾಡಿದ ಬಳಿಕ ಹೆಚ್ಚಿನ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ಗುಜರಾತ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಯುವತಿಯು ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದು, ಪ್ರೀತಿಸುತ್ತಿದ್ದ ಗೆಳೆಯನೊಂದಿಗೆ ಸೆಕ್ಸ್ ಮಾಡುವುದಕ್ಕಾಗಿ ಹೋಟೆಲ್ವೊಂದಕ್ಕೆ ತೆರಳಿದ್ದಳು. ಈ ವೇಳೆ ಗುಪ್ತಾಂಗದಲ್ಲಿ ರಕ್ತಸ್ರಾವ ಶುರುವಾಗಿತ್ತು. ಆಕೆಯ ಗೆಳೆಯ ಕೂಡಲೇ ವೈದ್ಯಕೀಯ ಸಹಾಯ ಪಡೆಯದೇ ಆನ್ಲೈನ್ನಲ್ಲಿ ಪರಿಹಾರ ಹುಡುಕಾಟ ನಡೆಸಲು ಶುರು ಮಾಡಿದ್ದ. ಸಂಭೋಗ ಸಮಯದಲ್ಲಿ ರಕ್ತಸ್ರಾವ ನಿಲ್ಲಿಸಲು ಆನ್ಲೈನ್ನಲ್ಲಿ ಸಲಹೆಗಳನ್ನು ಹುಡುಕಾಡುತ್ತಿದ್ದ. ಅಷ್ಟರಲ್ಲಿ ರಕ್ತಸ್ರಾವ ಇನ್ನೂ ಹೆಚ್ಚಾಗಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ವರದಿಗಳು ಉಲ್ಲೇಖಿಸಿವೆ.
ರಕ್ತಸ್ರಾವವಾಗುತ್ತಿದ್ದರೂ ಸೆಕ್ಸ್ಗೆ ಯತ್ನಿಸಿದ್ದ:
ಪರಿಹಾರ ಹುಡುಕುವ ಮುನ್ನ ತನ್ನ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿದ್ದರೂ ಮತ್ತಷ್ಟು ಬಲವಾಗಿ ಸಂಭೋಗಕ್ಕೆ ಪ್ರಯತ್ನಿಸುತ್ತಿದ್ದ. ಬಳಿಕ ಬಟ್ಟೆಯನ್ನು ಬಳಸಿ ನಿಲ್ಲಿಸಲು ಪ್ರಯತ್ನಿಸಿದ್ದ. ಆದ್ರೆ ಅದು ಪ್ರಯೋಜನಕ್ಕೆ ಬರಲಿಲ್ಲ. ಸ್ವಲ್ಪ ಸಮಯದ ಬಳಿಕ ಯುವತಿ ಮೋರ್ಛೆ ಹೋಗಿದ್ದಳು. ಇದರಿಂದ ಗಾಬರಿಗೊಂಡ ಗೆಳೆಯ ಸ್ನೇಹಿತರೊಬ್ಬರಿಗೆ ಕರೆ ಮಾಡಿ, ಆಕೆಯನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ, ಅಲ್ಲಿಂದ ಪುನಃ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಯುವತಿ ಸಾವಿನ ಬಳಿಕ ಯುವಕನನ್ನ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 ಮತ್ತು 238 ಅಡಿಯಲ್ಲಿ ಬಂಧಿಸಲಾಗಿದೆ.
ಎಫ್ಎಸ್ಎಲ್ ವರದಿ ಹೇಳಿದ್ದೇನು?
ಅತಿಯಾದ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ವಿಧಿವಿಜ್ಞಾನ ವರದಿ ಹೇಳಿದೆ. ಯುವತಿಗೆ ರಕ್ತಸ್ರಾವ ಶುರುವಾದ ನಂತರ ಆತ ಅಂಬುಲೆನ್ಸ್ಗೆ ಕರೆ ಮಾಡದೇ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಕೆಗೆ ಐವಿ ದ್ರವ, ರಕ್ತ, ಔಷಧಿ ಗಳನ್ನು ನೀಡಿ ತುರ್ತು ಚಿಕಿತ್ಸೆ ಕೊಡಿಸಿದ್ದರೆ ಬದುಕಿಸಬಹುದಿತ್ತು. ಆ ಕೆಲಸ ಮಾಡದಿದ್ದ ಕಾರಣ ಆಕೆ ಸಾವನ್ನಪ್ಪಿದ್ದಾಳೆ ಎಂದು ತಜ್ಞರು ತಿಳಿಸಿದ್ದಾರೆ. ಅಲ್ಲದೇ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಖಾಸಗಿ ಭಾಗಗಳಲ್ಲಿ ಗಂಭೀರ ಗಾಯಗಳಾಗಿರುವುದನ್ನು ವರದಿ ಬಹಿರಂಗಪಡಿಸಿದೆ. ಇದೇ ಸಾವಿಗೆ ಕಾರಣ ಎಂದೂ ಉಲ್ಲೇಖಿಸಲಾಗಿದೆ.
2 ವರ್ಷದ ಬಳಿಕ ಸಂಪರ್ಕಿಸಿದ್ದ ಪ್ರೇಮಿಗಳು:
ಮೃತ ಯುವತಿ ಮೊದಲ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಮೂರು ವರ್ಷಗಳ ಹಿಂದೆ ಭೇಟಿಯಾದಾಗ ಪ್ರೀತಿಸಲು ಶುರು ಮಾಡಿದ್ದರು. ಆದ್ರೆ ಕಳೆದ 2 ವರ್ಷಗಳಿಂದ ಭೇಟಿಯಾಗಿರಲಿಲ್ಲ. 7 ತಿಂಗಳ ಹಿಂದೆಯಷ್ಟೇ ಸೋಶಿಯಲ್ ಮೀಡಿಯಾದ ಮೂಲಕ ಮರುಸಂಪರ್ಕಿಸಿದ್ದರು. ನಂತರ ಸೆಪ್ಟೆಂಬರ್ 23ರಂದು ಖಾಸಗಿ ಸಮಯ ಕಳೆಯಲು ನಿರ್ಧರಿಸಿ, ಅದಕ್ಕೆ ಹೋಟೆಲ್ಗೆ ತೆರಳಿದ್ದರು. 60 ರಿಂದ 90 ನಿಮಿಷಗಳ ಕಾಲ ಹೋಟೆಲ್ನಲ್ಲಿ ಕಾಲ ಕಳೆದಿದ್ದರು. ಈ ವೇಳೆ ಸಂಭೋಗ ನಡೆಸಿದ್ದಾರೆ. ಮಧ್ಯಾಹ್ನ 2:15ಕ್ಕೆ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಹೋಟೆಲ್ನಿಂದ ಹೊರಡುವ ಮೊದಲು, ಸಾಕ್ಷ್ಯ ನಾಶಪಡಿಸಲು ಗೆಳೆಯ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.