ಮೈಸೂರು ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಮಲ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ 45 ವರ್ಷ ವಯಸ್ಸಿನ ಗಂಡಾನೆ ಕಂದಕಕ್ಕೆ ಬಿದ್ದು ಮೃತಪಟ್ಟಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ಗ್ರಾಮಸ್ಥರು ಕಂದಕ ನಿರ್ಮಿಸಿದ್ದರು.
ಆಹಾರ ಅರಸಿ ಗ್ರಾಮದ ಕಡೆ ಬರುವಾಗ ಕಾಡಾನೆ ಕಂದಕಕ್ಕೆ ಬಿದ್ದಿದೆ. ಕಂದಕದಲ್ಲಿ ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ಕಾಡಾನೆಯನ್ನು ಕಂಡ ಜನ ಕೂಡಲೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಆದರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕಾಡಾನೆ ಕೊನೆಯುಸಿರೆಳೆದಿದೆ. ಸದ್ಯ ಜೆಸಿಬಿ ಮೂಲಕ ಮೃತ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ಹೊರತೆಗೆದಿದ್ದಾರೆ. ಆನೆಯ ಒಂದು ಕಣ್ಣು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿತ್ತು. ಮತ್ತೊಂದು ಕಣ್ಣಿಗೂ ಪೊರೆ ಬಂದಿತ್ತು. ಕರಳಿನ ಕಾಯಿಲೆಯಿಂದಲೂ ಬಳಲುತ್ತಿತ್ತು. ಆನೆ ಹೃದಯಾಘಾತದಿಂದ ಅಸುನೀಗಿದೆ ಎಂದು ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ