ರಷ್ಯಾದ ಉತ್ತರ ಕಾಕಸಸ್ ಪ್ರದೇಶದ ಡಾಗೆಸ್ತಾನ್ ನಲ್ಲಿ ಭಾನುವಾರ ಅಪರಿಚಿತ ಬಂಧೂಕುದಾರಿಗಳು ಅಪ್ರಚೋದಿತವಾಗಿ ಎರಡು ಚರ್ಚ್ ಮತ್ತು ಪೊಲೀಸ್ ಪೋಸ್ಟ್ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಪೊಲೀಸರು ಮತ್ತು ಪಾದ್ರಿ ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಗವರ್ನರ್ ಸೆರ್ಗೆಯ್ ಮೆಲಿಕೋವ್ ತಿಳಿಸಿದ್ದಾರೆ.
ʼʼಶಸ್ತ್ರಸಜ್ಜಿತ ಉಗ್ರಗಾಮಿಗಳು 15ಕ್ಕೂ ಹೆಚ್ಚು ಪೊಲೀಸರು ಮತ್ತು ಆರ್ಥೊಡಾಕ್ಸ್ ಪಾದ್ರಿ ಸೇರಿದಂತೆ ಹಲವು ನಾಗರಿಕರನ್ನು ಹತ್ಯೆ ಮಾಡಿದ್ದಾರೆʼʼ ಎಂದು ಸೋಮವಾರ ಗವರ್ನರ್ ಸೆರ್ಗೆಯ್ ಮೆಲಿಕೋವ್ ಮಾಹಿತಿ ನೀಡಿದ್ದಾರೆ. ಡಾಗೆಸ್ತಾನ್ನ ಅತಿದೊಡ್ಡ ನಗರ ಮಖಚ್ಕಲಾ ಮತ್ತು ಕರಾವಳಿ ನಗರ ಡರ್ಬೆಂಟ್ನಲ್ಲಿ ಏಕಕಾಲದಲ್ಲಿ ದಾಳಿಗಳು ನಡೆದಿದ್ದು, ಸೆರ್ಗೆಯ್ ಮೆಲಿಕೊವ್ ಇದನ್ನು “ಭಯೋತ್ಪಾದಕ ದಾಳಿ” ಎಂದು ಕರೆದಿದ್ದಾರೆ. ಮಖಚ್ಕಲಾದಲ್ಲಿ ನಾಲ್ವರು ಮತ್ತು ಡರ್ಬೆಂಟ್ನಲ್ಲಿ ಇಬ್ಬರು ಬಂದೂಕುಧಾರಿಗಳನ್ನು ಪೊಲೀಸ್ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.
ಎರಡು ಆರ್ಥೊಡಾಕ್ಸ್ ಚರ್ಚ್ಗಳು, ಸಿನಗಾಗ್ ಮತ್ತು ಟ್ರಾಫಿಕ್ ಪೋಲಿಸ್ ಪೋಸ್ಟ್ ಅನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಮೃತರಲ್ಲಿ ಪೊಲೀಸ್ ಅಧಿಕಾರಿಗಳಲ್ಲದೆ, ಡರ್ಬೆಂಟ್ನಲ್ಲಿ 40 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ ಆರ್ಥೊಡಾಕ್ಸ್ ಪಾದ್ರಿ ಸೇರಿದಂತೆ ಹಲವು ನಾಗರಿಕರು ಸೇರಿದ್ದಾರೆ ಎಂದು ಮೆಲಿಕೊವ್ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಪಾದ್ರಿ ಮತ್ತು ಪೊಲೀಸರು ಸಾವನ್ನಪ್ಪಿದ್ದಾರೆ. 6 ಬಂದೂಕುಧಾರಿಗಳನ್ನು ರಕ್ಷಣಾ ಪಡೆಗಳು ಬೆನ್ನಟ್ಟಿ ಹೊಡೆದುರುಳಿಸಿವೆ. ದಾಳಿಯಲ್ಲಿ ಎಷ್ಟು ಉಗ್ರರು ಭಾಗಿಯಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಭಯೋತ್ಪಾದನಾ ವಿರೋಧಿ ಸಮಿತಿ ಹೇಳಿದೆ.