ಮೈಸೂರು: ಫಲಿತಾಂಶಕ್ಕೂ ಮುನ್ನವೇ ಚಾಮುಂಡೇಶ್ವರಿಯಲ್ಲಿ ಬುಕ್ಕಿಂಗ್ ಬಡಿದಾಟ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲಿಯೇ ಮಾವಿನಹಳ್ಳಿ ಸಿದ್ದೇಗೌಡ ನಾನು ಯಾರ ಜೊತೆಯೂ ಬುಕ್ಕಿಂಗ್ ಆಗಿಲ್ಲ ಎಂದು ಉಪ್ಪು ಮುಟ್ಟಿ ಪ್ರಮಾಣ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾವಿನಹಳ್ಳಿ ಸಿದ್ದೇಗೌಡ, ನಾನು ಯಾವ ಒಳ ಒಪ್ಪಂದವನ್ನು ಮಾಡಿಕೊಂಡಿಲ್ಲ, ಇದು ಮೂಲ ಕಾಂಗ್ರೆಸಿಗ ಮರಿಗೌಡನ ಪಿತೂರಿ, ಜನರ ಗುಂಪು ಕಟ್ಟಿಕೊಂಡು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಹಾಳಾಗಲು ಮರಿಗೌಡ ಕಾರಣ, ನಾನು ಬುಕ್ ಆಗಿಲ್ಲ. ಜಿಟಿ ದೇವೇಗೌಡ ಅವರ ಮನೆ ಬಾಗಿಲಿಗೂ ಹೋಗಿಲ್ಲ, ನಾನು ಸೋಲಲಿ ಅಥವಾ ಗೆಲ್ಲಲಿ ಸಿದ್ದರಾಮಯ್ಯ ಅವರನ್ನು ಹೋಗಿ ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವರ್ತನೆ ಕುರಿತು ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಸಿದ್ದರಾಮಯ್ಯ ಕೂಡ ಮಾವಿನಹಳ್ಳಿ ಸಿದ್ದೇಗೌಡ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು. ಅವನೊಬ್ಬ ಮೋಸಗಾರ. ಅವನು ಇಂಥವನು ಅಂತ ಗೊತ್ತಿದ್ದರೆ ನಮ್ಮ ಹುಡುಗನನ್ನೇ ಎಲೆಕ್ಷನ್ಗೆ ನಿಲ್ಲಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು
ಸಿದ್ದರಾಮಯ್ಯ ಆಕ್ರೋಶದ ಬೆನ್ನಲ್ಲಿಯೇ ಮಾವಿನಹಳ್ಳಿ ಸಿದ್ದೇಗೌಡ ಉಪ್ಪು ಮುಟ್ಟಿ ಪ್ರಮಾಣ ಮಾಡಿದ್ದು, ನಾನು ಯಾರ ಜೊತೆ ಬುಕ್ಕಿಂಗ್ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವಿಚಾರಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಜಿಟಿ ದೇವೇಗೌಡ ಕೂಡ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ರಾಜಕಾರಣ ಗೊತ್ತಿಲ್ಲ ಎಂದು ಹೇಳಿದ್ದಾರೆ.