ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾವು ವಾಸವಿದ್ದ ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದ ಗುರುಪ್ರಸಾದ್ ಜರ್ಜರಿತರಾಗಿ ಜೀವನ ಕೊನೆಯಾಗಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ನಿರ್ದೇಶಕ, ನಟ, ಸಂಭಾಷಣೆಕಾರ ಮಠ ಖ್ಯಾತಿಯ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡ ಬಜೆಟ್ನಿಂದ ಮಾತ್ರ ಒಂದು ಉತ್ತಮ ಚಿತ್ರ ನಿರ್ಮಾಣವಾಗುತ್ತೆ ಅಂತಿದ್ದ ಸಮಯದಲ್ಲಿ ಗಟ್ಟಿ ಕಥೆಯಿಂದಲೇ ಸಿನಿಮಾ ಮಾಡಿ ಗೆದ್ದು ತೋರಿಸಿದ್ದ ನಿರ್ದೇಶಕ ಗುರುಪ್ರಸಾದ್ ತಮ್ಮ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.
ಸಮಾಜದ ಅಂಕುಡೊಂಕುಗಳನ್ನು ತಮ್ಮ ಸಿನಿಮಾಗಳಲ್ಲಿ ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದ ಗುರು ಪ್ರಸಾದ್ ಖುದ್ದು ಜೀವನದ ಆಗುಹೋಗುಗಳನ್ನ ಎದುರಿಸಲಾಗದೇ ಬದುಕಿಗೆ ವಿದಾಯ ಹೇಳಿದ್ದಾರೆ. ಬೆಂಗಳೂರಿನ ಮಾದನಾಯಕನ ಹಳ್ಳಿಯಲ್ಲಿರುವ ನ್ಯೂ ಹೆವೆನ್ ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ನೇಣಿಗೆ ಶರಣಾಗಿದ್ದಾರೆ.
8 ತಿಂಗಳಿನಿಂದ ನ್ಯೂ ಹೆವೆನ್ ಅಪಾರ್ಟ್ಮೆಂಟ್ನಲ್ಲಿ ಅವರು ಬಾಡಿಗೆಗೆ ವಾಸವಾಗಿದ್ದರು. 5-6 ದಿನಗಳ ಹಿಂದೆಯೇ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತದೇಹ ಕೊಳೆತ ಹಾಗೂ ರಕ್ತವಾಂತಿಯಾದ ರೀತಿಯಲ್ಲಿ ಪತ್ತೆಯಾಗಿದೆ. ದುರ್ವಾಸನೆ ಬರ್ತಾ ಇದ್ದ ಕಾರಣ ಅಪಾರ್ಟ್ಮೆಂಟ್ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಫ್ಲಾಟ್ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇನ್ನು ಗುರುಪ್ರಸಾದ್ ಹೆಚ್ಚಿನ ಸಾಲ ಮಾಡಿಕೊಂಡಿದ್ದರು ಎನ್ನಲಾಗ್ತಿದೆ. ಇದರಿಂದ ಸಾಲಗಾರರ ಕಾಟ ಅಧಿಕವಾಗಿತ್ತಂತೆ. ಒಂದ್ಕಡೆ ಸಾಲು ಸಾಲು ಸಿನಿಮಾ ಫ್ಲಾಪ್ ಹಾಗೂ ಸಾಲದಿಂದ ಗುರು ಜರ್ಜರಿತರಾಗಿದ್ದರಂತೆ. ಇದೆಲ್ಲ ಸಮಸ್ಯೆಯಿಂದ ಅಪಾರ್ಟ್ಮೆಂಟ್ ಪಕ್ಕದ ಅಪೋಲೋದಲ್ಲಿ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಒಟ್ಟಾರೆ ಸಿನಿಮಾಗಳ ಮೂಲಕ ಸಮಾಜದ ಅಂಕುಡೊಂಕುಗಳ ತಿದ್ದುವ ಕೆಲಸ ಮಾಡ್ತಿದ್ದ ನಿರ್ದೇಶಕ ಗುರು ಈಗ ತಮ್ಮ ಸಮಸ್ಯೆಗಳಿಂದ ಹೊರಬರಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ.