ಬೆಂಗಳೂರು: ಗುರುರಾಘವೇಂದ್ರ ಬ್ಯಾಂಕ್ ಹಗರಣಕ್ಕೆ (Guru Raghavendra Bank Scam) ಸಂಬಂಧಿಸಿದಂತೆ ಜಿ.ರಘುನಾಥ್’ಗೆ ಬೆಂಗಳೂರಿನ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಭದ್ರತೆ ಇಲ್ಲದೆ 105 ಕೋಟಿ ರೂ. ಸಾಲ ಪಡೆದ ಆರೋಪ ಎದುರಿಸುತ್ತಿದ್ದ ಜಿ.ರಘುನಾಥ್ ಎಂಬುವರಿಗೆ ವೈದ್ಯಕೀಯ ಕಾರಣಗಳನ್ನು ಆಧರಿಸಿ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಆರೋಪಿ ತಮ್ಮ ಪಾಸ್ಪೋರ್ಟ್ ಪೊಲೀಸರ ವಶಕ್ಕೆ ಒಪ್ಪಿಸುವುದಲ್ಲದೆ, ವೈಯಕ್ತಿಕವಾಗಿ 25 ಲಕ್ಷ ಮೊತ್ತದ ಎರಡು ಬಾಂಡ್ ಮತ್ತು ಅಷ್ಟೇ ಮೊತ್ತದ ಎರಡು ಶ್ಯೂರಿಟಿ ನೀಡಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ, ಕೋರ್ಟ್ ವ್ಯಾಪ್ತಿ ಬಿಟ್ಟು ಹೊರಗೆ ಹೋಗಬಾರದು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.
ಆರೋಪಿ 10 ತಿಂಗಳಿಂದ ನ್ಯಾಯಾಂಗ ವಶದಲ್ಲಿದ್ದಾರೆ. ಅಲ್ಲದೆ, ಸೆಷನ್ಸ್ ಕೋರ್ಟ್ ಇಂತಹದೇ ಆರೋಪ ಎದುರಿಸುತ್ತಿದ್ದವರಿಗೆ ಜಾಮೀನು ನೀಡಿದೆ. ಅದೇ ಆಧಾರದಲ್ಲಿ ಅರ್ಜಿದಾರರಿಗೂ ಜಾಮೀನು ನೀಡುತ್ತಿರುವುದಾಗಿ ಹೈಕೋರ್ಟ್ ತಿಳಿಸಿದೆ. ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ಆರೋಪಿ ಸರ್ವಿಕಲ್ ಸ್ಪಾಂಡಿಲೈಸಿಸ್, ಇರಿಟಬಲ್ ಬೊವೆಲ್ ಡಿಸಾರ್ಡರ್, ಲಿವರ್ ತೊಂದರೆ, ಅಧಿಕ ರಕ್ತದೊತ್ತಡ, ಮಾನಸಿಕ ಖಿನ್ನತೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದು, ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಧಾರದಲ್ಲಿ ಜಾಮೀನು ನೀಡಬೇಕೆಂದು ನ್ಯಾಯಪೀಠವನ್ನು ಕೋರಿದ್ದರು.