ಬೆಂಗಳೂರು: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪ್ರೇರಣೆ’ ಮಾಜಿ ಸಚಿವ ಡಾ. ಕೆ ಸುಧಾಕರ್ ಆರೋಪಕ್ಕೆ ಎಂಎಲ್ಸಿ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ನಮ್ಮನ್ನು ಬಿಜೆಪಿಗೆ ಕಳುಹಿಸಿರಲಿಲ್ಲ. ಬಾಂಬೆ ಟೀಂ ಕ್ಯಾಪ್ಟನ್ ಆಗಿದ್ದೆ, ಏನಾಗಿದೆ ಅನ್ನೋದು ಗೊತ್ತು. ಈಗ ಯಾಕೆ ಡಾ.ಕೆ.ಸುಧಾಕರ್ ಮಾತನಾಡ್ತಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಗ್ಗಟ್ಟಿನಿಂದ ಸರ್ಕಾರ ಮುನ್ನಡೆಸುತ್ತಾರೆ. ನಾನು ಕೂಡ ಈ ಸರ್ಕಾರಕ್ಕೆ ಸಲಹೆ ನೀಡುತ್ತೇನೆ. ಬಿಜೆಪಿ ಮಾಡಿದ ತಪ್ಪುಗಳಿಂದ ಅಧಿಕಾರ ಕಳೆದುಕೊಂಡಿತು ಎಂದು ಹೇಳಿದರು.ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Election Result) ಮೇ 13ರಂದು ಪ್ರಕಟವಾಗಿದ್ದು,
ಮರುದಿನ ನಡೆದ ಪ್ರಥಮ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಸಭೆಯ ನಿರ್ಣಯದಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿಕೊಂಡು ಹಲವು ಸುತ್ತಿನ ಸಭೆ ನಡೆಸಿದ್ದರು. ನಾಲ್ಕು ದಿನಗಳ ರಾಜಿ ಸಂಧಾನದ ಮಾತುಕತೆಯು ಸೋನಿಯಾ ಗಾಂಧಿ ಮಧ್ಯ ಪ್ರವೇಶದ ಬಳಿಕ ಸುಖಾಂತ್ಯ ಕಂಡಿದೆ. ಅಧಿಕೃತವಾಗಿ ಗುರುವಾರ ಮಧ್ಯಾಹ್ನ ಸಿದ್ದರಾಮಯ್ಯರನ್ನು ಸಿಎಂ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಎಂದು ಘೋಷಿಸಲಾಯಿತು.