ದುಬೈ: ಹಜ್ ಯಾತ್ರೆಗೆಂದು ಮೆಕ್ಕಾಗೆ ತೆರಳಿರುವ ಸಾವಿರಾರು ಯಾತ್ರಿಕರು ಬಿಸಿಲ ಝಳಕ್ಕೆ ಹೈರಾಣಾಗಿದ್ದು, ಅರಾಫತ್ ಪರ್ವತದಲ್ಲಿ ತಾಪಮಾನವು 48 ಡಿ.ಸೆ.ಗೆ ತಲುಪಿದೆ. 2 ಸಾವಿರಕ್ಕೂ ಅಧಿಕ ಮಂದಿ “ಅಧಿಕ ತಾಪದ ಒತ್ತಡ’ ಸಮಸ್ಯೆಯಿಂದ ಬಳಲುತ್ತಿದ್ದು, ನೂರಾರು ಮಂದಿ ಮೃತಪಟ್ಟಿದ್ದಾರೆ ಎಂದೂ ಹೇಳಲಾಗಿದೆ. ಆದರೆ ಈ ಕುರಿತು ಸೌದಿ ಆಡಳಿತ ಮಂಡಳಿ ಯಾವುದೇ ಮಾಹಿತಿ ನೀಡಿಲ್ಲ.
ಈ ಬಾರಿ ಸುಮಾರು 18 ಲಕ್ಷ ಮುಸ್ಲಿಂ ಯಾತ್ರಿಕರು ಹಜ್ ಯಾತ್ರೆ ಪೂರ್ಣಗೊಳಿಸಿದ್ದಾರೆ. ಕೊರೊನಾ ನಂತರ ಗರಿಷ್ಠ ವಯೋಮಿತಿಯನ್ನು ತೆಗೆದುಹಾಕಿದ ಕಾರಣ ಈ ಬಾರಿ ಹಿರಿಯ ನಾಗರಿಕ ಯಾತ್ರಿಕರ ಸಂಖ್ಯೆ ಅಧಿಕವಾಗಿತ್ತು. ಗುರುವಾರ ಒಂದೇ ದಿನ 1700ಕ್ಕೂ ಹೆಚ್ಚು ಮಂದಿ ಬಿಸಿಲಿನ ಝಳ ತಾಳಲಾರದೆ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಸೌದಿ ಆರೋಗ್ಯ ಇಲಾಖೆ ತಿಳಿಸಿದೆ. ಜತೆಗೆ, ಸಾಧ್ಯವಾದಷ್ಟು ಬಿಸಿಲಿಗೆ ಬಾರದೇ, ಹೆಚ್ಚು ನೀರು ಕುಡಿಯುವಂತೆಯೂ ಸಲಹೆ ನೀಡಿದೆ.
ಇದೇ ವೇಳೆ, ಇಂಡೋನೇಷ್ಯಾ ಸರ್ಕಾರವು ಹಜ್ ಯಾತ್ರೆ ವೇಳೆ ತನ್ನ 230 ನಾಗರಿಕರು ಮೃತಪಟ್ಟಿರುವುದಾಗಿ ತಿಳಿಸಿದೆ. ಇನ್ನು, ಇರಾನ್ನ 10 ಮಂದಿ, ಅಲ್ಜೀರಿಯಾದ 8, ಮೊರೊಕ್ಕೋದ ನಾಲ್ವರು, ಈಜಿಪ್ಟ್ನ 8 ಯಾತ್ರಿಕರು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇವರೆಲ್ಲರ ಸಾವಿಗೂ ತಾಪಮಾನವೇ ಕಾರಣ ಎಂಬುದು ದೃಢಪಟ್ಟಿಲ್ಲ.