ಟೆಲ್ ಅವಿವ್: ಗಾಜಾ ಪಟ್ಟಿಯಲ್ಲಿ (Gaza Strip) ಇಬ್ಬರು ಇಸ್ರೇಲಿ ಒತ್ತೆಯಾಳುಗಳನ್ನು (Hostages) ಬಿಡುಗಡೆ ಮಾಡಿರುವುದಾಗಿ ಹಮಾಸ್ (Hamas) ತಿಳಿಸಿದೆ. ಮಾನವೀಯ ಕಾರಣಗಳಿಂದಾಗಿ ಇಬ್ಬರು ವೃದ್ಧ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಮಾನವೀಯ ಹಾಗೂ ಅವರ ಆರೋಗ್ಯದ ಕಾಳಜಿಯ ಹಿನ್ನೆಲೆ ನಾವು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ಹಮಾಸ್ ಸೋಮವಾರ ತಿಳಿಸಿದೆ.
ಬಿಡುಗಡೆಯಾದ ಒತ್ತೆಯಾಳುಗಳನ್ನು ನೂರಿಟ್ ಕೂಪರ್ (79) ಹಾಗೂ ಯೋಚೆವೆಡ್ ಲಿಫ್ಶಿಟ್ಜ್ (85) ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಗಾಜಾ ಗಡಿಯ ಸಮೀಪವಿರುವ ನಿರ್ ಓಜ್ನ ಕಿಬ್ಜತ್ಜ್ನಲ್ಲಿ ಈ ಇಬ್ಬರು ವೃದ್ಧೆಯರನ್ನು ಅವರ ಪತಿಯರೊಂದಿಗೆ ತಮ್ಮ ಮನೆಗಳಿಂದ ಹಮಾಸ್ ಉಗ್ರರು ಒತ್ತೆಯಾಳಾಗಿ ತೆಗೆದುಕೊಂಡಿದ್ದರು. ಇದೀಗ ವೃದ್ಧ ಮಹಿಳೆಯರನ್ನು ಆರೋಗ್ಯದ ಹಾಗೂ ಮಾನವೀಯ ದೃಷ್ಟಿಯಿಂದ ಬಿಡುಗಡೆ ಮಾಡಿದರೂ ಅವರ ಪತಿಯರನ್ನು ಬಿಡುಗಡೆ ಮಾಡಲಾಗಿಲ್ಲ ಎನ್ನಲಾಗದೆ.
ಇದಕ್ಕೆ ಸಂಬಂಧಿಸಿದಂತೆ ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್ಕ್ರಾಸ್ ಒತ್ತೆಯಾಳುಗಳ ಬಿಡುಗಡೆಯನ್ನು ಸುಗಮಗೊಳಿಸಿದೆ ಎಂದು ತಿಳಿಸಿದೆ. ಬಿಡುಗಡೆಯಾದ ಒತ್ತೆಯಾಳುಗಳು ಈಜಿಪ್ಟಿನ ರಫಾ ಕ್ರಾಸಿಂಗ್ಗೆ ಆಗಮಿಸಿದ್ದಾರೆ ಎಂದು ಈಜಿಪ್ಟ್ ಸುದ್ದಿ ಸಂಸ್ಥೆ ತಡರಾತ್ರಿ ವರದಿ ಮಾಡಿದೆ. ಆದರೆ ಈ ಬಗ್ಗೆ ಇಸ್ರೇಲ್ (Israel) ಯಾವುದೇ ಅಧಿಕೃತ ಪ್ರಕಟಣೆಯನ್ನು ಮಾಡಿಲ್ಲ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಗಾಜಾ ಪಟ್ಟಿ ಬಳಿ ದಾಳಿ ನಡೆಸಿ ಇಸ್ರೇಲಿ ಪ್ರಜೆಗಳು ಸೇರಿದಂತೆ ನೂರಾರು ಜನರನ್ನು ಅಪಹರಿಸಿದ್ದರು. ಅವರನ್ನು ಒತ್ತೆಯಾಳಾಗಿ ಇಟ್ಟ 2 ವಾರಗಳ ಬಳಿಕ ಕಳೆದ ಅಮೆರಿಕ ಮೂಲದ ಜುಡಿತ್ ಹಾಗೂ ನಟಾಲಿ ರಾನನ್ ಅವರನ್ನು ಹಮಾಸ್ ಬಿಡುಗಡೆ ಮಾಡಿದೆ. ಇಸ್ರೇಲಿ ಸೇನೆಯ ಅಂದಾಜಿನ ಪ್ರಕಾರ 220ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಹಮಾಸ್ ವಶದಲ್ಲಿದ್ದಾರೆ.