ಬೆಂಗಳೂರು: ಕುಮಾರಸ್ವಾಮಿ ತಪ್ಪು ಮಾಡಿದ್ರೆ ನೇಣಿಗೆ ಹಾಕಿ. ನೀವು ತಪ್ಪು ಮಾಡಿದ್ರೆ ಏನು ಮಾಡಬೇಕು ಹೇಳಿ ಎಂದು ಕೆರಗೋಡು ಪ್ರಕರಣದ ತನಿಖೆಗೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಸವಾಲು ಹಾಕಿದರು.
ಜೆಡಿಎಸ್ ಕಚೇರಿಯಲ್ಲಿ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಹೆಚ್ಡಿಕೆ, ಕೆರಗೋಡು ಘಟನೆಯಲ್ಲಿ ಸರಿಯಾಗಿ ಕ್ರಮ ತೆಗೆದುಕೊಂಡಿದ್ರೆ ಒಂದು ತನಿಖೆ ಮಾಡಿಸಿ. ಅದರ ಸರ್ಟಿಫಿಕೇಟ್ ತೆಗೆದುಕೊಳ್ಳಿ. ಕೆರಗೋಡು ಘಟನೆ ತನಿಖೆ ಮಾಡಿ. ಕುಮಾರಸ್ವಾಮಿ ತಪ್ಪು ಮಾಡಿದ್ರೆ ನೇಣಿಗೆ ಹಾಕಿ. ನೀವು ತಪ್ಪು ಮಾಡಿದ್ರೆ ಏನ್ ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು
ರಾಜ್ಯದಲ್ಲಿ ಹಲವಾರು ದಿನಗಳಿಂದ ಅನೇಕ ವಿಷಯ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಮುಂದೆ ಕಡಿಮೆ ಬರ್ತಿದ್ದೇನೆ. ಅನಿವಾರ್ಯವಾಗಿ ಇವತ್ತು ಭಾವನೆ ಹಂಚಿಕೊಳ್ಳೋ ಪರಿಸ್ಥಿತಿ ಈ ಸರ್ಕಾರದ ನಡವಳಿಕೆಯಿಂದ ಬಂದಿದೆ. ಎರಡು ದಿನಗಳಿಂದ ಮಂಡ್ಯದಲ್ಲಿ ಒಂದು ಘಟನೆ ನಡೆಯುತ್ತಿದೆ. ಕೆರಗೋಡಿನಲ್ಲಿ ಧ್ವಜಸ್ತಂಭದ ರಾಜಕೀಯ ನಡೆಯುತ್ತಿದೆ. ದೇವರಾಜ್ ಅರಸ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಶೋಷಿತ ವರ್ಗದ ಜನರ ಪರವಾಗಿ ವೀರಾವೇಶದ ಭಾಷಣವನ್ನು ಸಿಎಂ ಮಾಡಿದ್ದಾರೆ. ಚೆಲುವರಾಯಸ್ವಾಮಿ ನಮಗೆ ಕೆಲವು ಉಪದೇಶ ಹೇಳಿದ್ದಾರೆ. ಕೆಲವು ವಿಷಯಗಳನ್ನ ಮಂಡ್ಯದಲ್ಲಿ ಹೇಳಿದ್ದಾರೆ. ನನ್ನ ಮೇಲೆ ಆರೋಪ ಹೊರಸಿದ್ದಾರೆ. ಮಂಡ್ಯ ಹಾಳು ಮಾಡೋಕೆ ಬಂದಿದ್ದೇನೆ ಅಂತ ಹೇಳಿದ್ದಾರೆ. ಅವರ ಮುಖಭಾವ ನೋಡಿದೆ. ಅವರ ಮುಖಭಾವದಲ್ಲಿ ಅತಿ ವಿನಯಂ ದೂರ್ತ ಲಕ್ಷಣಂ. ಅವರ ಮುಖದಲ್ಲಿ ಹಾಗೇ ಕಾಣ್ತಿತ್ತು ಎಂದು ಟಾಂಗ್ ಕೊಟ್ಟರು.
ಮಂಡ್ಯ ಜಿಲ್ಲೆ ಸಿದ್ಧಾಂತ ನಾಶ ಮಾಡೋಕೆ ನಾನು ಹೋಗಿದ್ದೆ ಅಂತಾರೆ. ನನ್ನ ಜೊತೆ ಇದ್ದವರು ಅವರು. ಜೆಪಿ, ಧರ್ಮೇಗೌಡ ಸೇರಿದಂತೆ ಅನೇಕರ ಹೆಸರು ಹೇಳಿದ್ದಾರೆ. ಕೆರಗೋಡು ಘಟನೆಗೂ ನನಗೂ ಏನು ಸಂಬಂಧ ಇದೆ? ಸಿಎಂ, ಚೆಲುವರಾಯಸ್ವಾಮಿ ಅವರನ್ನ ಕೇಳ್ತೀನಿ. ಸರ್ಕಾರದ ನಡವಳಿಕೆ, ನಿಮ್ಮ ವೈಫಲ್ಯವನ್ನ ನನ್ನ ಮೇಲೆ ಹೇಳ್ತಿದ್ದೀರಾ? ನನ್ನಿಂದ ಆದ ಪ್ರಮಾದವೇನು ಎಂದು ಪ್ರಶ್ನಿಸಿದರು