ಟಾಲಿವುಡ್ ನಟ ಅಕ್ಕಿನೇನಿ ನಾಗ ಚೈತನ್ಯ ಕಳೆದ ಎರಡು ದಿನಗಳ ಹಿಂದೆ ನಟಿ ಶೋಭಿತಾ ಜೊತೆ ಎಂಗೇಜ್ ಮೆಂಟ್ ಆಗಿದ್ದಾರೆ. ಇದು ಸಮಂತಾ ಅಭಿಮಾನಿಗಳಿಗೆ ಬೇಸರವಾಗಿದೆ. ಸಾಕಷ್ಟು ವರ್ಷಗಳ ಕಾಲ ಪ್ರೀತಿಸುತ್ತಿದ್ದ ನಾಗಚೈತನ್ಯ ಹಾಗೂ ಸಮಂತಾ ಮದುವೆಯಾದ ನಾಲ್ಕೇ ವರ್ಷಕ್ಕೆ ದೂರವಾಗಿದ್ದರು. ಆ ಬಳಿಕ ಸಮಂತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. ಇನ್ನೂ ನಟ ನಾಗಚೈತನ್ಯ ಜೀವನಕ್ಕೆ ಶೋಭಿತಾ ಎಂಟ್ರಿಕೊಟ್ಟದ್ದರು. ಈ ಬಗ್ಗೆ ಅವರ ತಂದೆ ಅಕ್ಕಿನೇನಿ ನಾಗಾರ್ಜುನ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
2017ರಲ್ಲಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ಮದುವೆ ಆಗಿದ್ದರು. ಆದರೆ 2021ರಲ್ಲಿ ಅವರಿಬ್ಬರು ವಿಚ್ಚೇದನ ಪಡೆದುಕೊಂಡರು. ‘ಡಿವೋರ್ಸ್ ಆದಾಗ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದ. ಅದು ಅವನಿಗೆ ಮತ್ತು ಕುಟುಂಬಕ್ಕೆ ಕಷ್ಟದ ಸಮಯ ಆಗಿತ್ತು. ನನ್ನ ಮಗ ಯಾರ ಎದುರಲ್ಲೂ ಫೀಲಿಂಗ್ಸ್ ತೋರಿಸಿಕೊಳ್ಳುವುದಿಲ್ಲ. ಆದರೆ ನನಗೆ ಗೊತ್ತು, ಆತ ದುಃಖದಲ್ಲಿದ್ದ. ಈಗ ಅವನು ಖುಷಿಯಾಗಿರುವುದು ಕಾಣುತ್ತಿದ್ದೇನೆ. ಶೋಭಿತಾ ಮತ್ತು ನಾಗ ಚೈತನ್ಯ ಒಳ್ಳೆಯ ಜೋಡಿ. ಇಬ್ಬರೂ ಪರಸ್ಪರ ತುಂಬ ಪ್ರೀತಿಸುತ್ತಾರೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಗಾರ್ಜುನ ಹೇಳಿದ್ದಾರೆ.
ನಾಗ ಚೈತನ್ಯ ಮತ್ತು ಶೋಭಿತಾ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಏಕಾಏಕಿ ಅವರು ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಎಲ್ಲವೂ ಗಡಿಬಿಡಿಯಲ್ಲಿ ನಡೆದು ಹೋಗಿದೆ. ನಿಶ್ಚಿತಾರ್ಥದ ಫೋಟೋಗಳನ್ನು ಕುಟುಂಬದವರು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ತುಂಬಾ ಅವಸರದಲ್ಲಿ ಎಂಗೇಜ್ಮೆಂಟ್ ಮಾಡಿದ್ದು ಯಾಕೆ ಎಂಬುದಕ್ಕೆ ನಟ ನಾಗಾರ್ಜುನ್ ಸ್ಪಷ್ಟನೆ ನೀಡಿದ್ದಾರೆ.
ಆಗಸ್ಟ್ 8ರಂದು ಶೋಭಿತಾ ಮತ್ತು ನಾಗ ಚೈತನ್ಯ ರಿಂಗ್ ಬದಲಾಯಿಸಿಕೊಂಡರು. ‘ನಾವು ಈ ದಿನವನ್ನು ಸೆಲೆಕ್ಟ್ ಮಾಡಿದ್ದು ಯಾಕೆಂದರೆ ಇದು ಒಳ್ಳೆಯ ದಿನವಾಗಿತ್ತು. ಎರಡೂ ಕುಟುಂಬದವರು ಜಾತಕ ನೋಡಿದಾಗ ಆಗಸ್ಟ್ 8 ಒಳ್ಳೆಯ ದಿನ ಅಂತ ಹೇಳಿದರು. ಹಾಗಾಗಿ ನಾವು ಮುಂದುವರಿದೆವು. ಆದರೆ ಮದುವೆ ತಕ್ಷಣಕ್ಕೆ ಆಗುವುದಿಲ್ಲ’ ಎಂದು ನಾಗಾರ್ಜುನ ತಿಳಿಸಿದ್ದಾರೆ.