ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ. ಹೌದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ ಸಮಯದೊಳಗೆ 20 ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ 30 ಲಕ್ಷ ರೂ.
ದಂಡ ಹಾಗೂ ಒಂದು ಪಂದ್ಯದ ನಿಷೇಧ ಹೇರಲಾಗಿದೆ.
ಆದರೆ ಇತ್ತ ಮುಂಬೈ ಇಂಡಿಯನ್ಸ್ ತಂಡದ ಪಂದ್ಯಗಳು ಮುಗಿದಿದ್ದು, ಹೀಗಾಗಿ ಈ ನಿಷೇಧ ಮುಂದಿನ ಸೀಸನ್ನಲ್ಲಿ ಜಾರಿಯಾಗಲಿದೆ. ಅದರಂತೆ ಐಪಿಎಲ್ 2025 ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವುದಾದರೆ ಮೊದಲ ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ.
ಏಕೆಂದರೆ ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ನನ್ನು ಕಡಿತ ಮಾಡಲಾಗುತ್ತದೆ. ಹಾಗೆಯೇ ಈ ತಪ್ಪನ್ನು ಮಾಡಿದ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇನ್ನು ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ, ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರಿಗೆ ತಲಾ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ. ಈ ತಪ್ಪನ್ನು ಮೂರನೇ ಬಾರಿ ಆವರ್ತಿಸಿದರೆ, ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಮೂರು ಬಾರಿ ತಪ್ಪು ಮಾಡಿದ ನಾಯಕ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ.
ಹಾಗೆಯೇ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರು ತಲಾ 12 ಲಕ್ಷ ರೂ. ಅಥವಾ ಪಂದ್ಯದ ಶುಲ್ಕದ ಶೇ. 50 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಅದರಂತೆ ಇದೀಗ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ 2 ಬಾರಿ ಸ್ಲೋ ಓವರ್ ರೇಟ್ ತಪ್ಪು ಮಾಡಿದ್ದ ಹಾರ್ದಿಕ್ ಪಾಂಡ್ಯ ಇದೀಗ ಮೂರನೇ ಬಾರಿಗೆ ಅದೇ ತಪ್ಪನ್ನು ಪುನರಾವರ್ತಿಸಿದ್ದಾರೆ. ಈ ಮೂಲಕ ಐಪಿಎಲ್ 2025ರ ಮೊದಲ ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದಾರೆ.