ಟ್ರೋಲ್, ಟೀಕೆಗಳ ಬಗ್ಗೆ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ಮೌನ ಮುರಿದಿದ್ದಾರೆ. ಈ ಮೂಲಕ ತನ್ನ ಕಳಪೆ ಫಾರ್ಮ್ ಬಗ್ಗೆ ಟ್ರೋಲ್ ಮತ್ತು ಟೀಕೆಗಳನ್ನು ಮಾಡುತ್ತಿದ್ದವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಪಾಂಡ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈ ಬಾರಿಯ ಐಪಿಎಲ್ ಪ್ರಾರಂಭವಾಗುವ ಮೊದಲೇ ಪಾಂಡ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಲೀಗ್ ಉದ್ದಕ್ಕೂ ಹಾರ್ದಿಕ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದರು. ಇದೀಗ ಪಾಂಡ್ಯ ತಮ್ಮ ಕಷ್ಟದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಅಭ್ಯಾಸ ಪಂದ್ಯದ ವೇಳೆ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಉಪನಾಯಕ ಹಾರ್ದಿಕ್ ಪಾಂಡ್ಯ, ‘ಹೌದು ಕಳೆದ ಕೆಲವು ದಿನಗಳು ಕಷ್ಟಕರವಾಗಿತ್ತು. ಆದರೆ ನಾನು ಮೊದಲಿನಿಂದಲೂ ಅದೇ ದಿನಚರಿಯನ್ನು ಅನುಸರಿಸಿದ್ದೇನೆ. ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬರುತ್ತಲೇ ಇರುತ್ತವೆ. ನಾನು ಈ ಮೊದಲು ಅಂತಹ ಹಂತವನ್ನು ಎದುರಿಸಿದ್ದೇನೆ’. ಈ ಬಾರಿಯೂ ನಾನು ಎಲ್ಲದರಿಂದ ಹೊರಬರುತ್ತೇನೆ. ನಾನು ಯಶಸ್ಸನ್ನು ಹೆಚ್ಚಾಗಿ ತಲೆಗೇರಿಸಿಕೊಳ್ಳುವುದಿಲ್ಲ ಅಥವಾ ವೈಫಲ್ಯಗಳಿಂದ ಕುಗ್ಗುವುದಿಲ್ಲ. ನಾನು ಯಾವುದರಿಂದಲೂ ಓಡಿಹೋಗುವುದಿಲ್ಲ ಎಂದರು.