ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ನಟಿ ಕಂ ಮಾಡೆಲ್ ನತಾಶಾ ಸಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಆದ್ರೆ ಈ ಬಗ್ಗೆ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ಬೇರೆ ಆಗಿದ್ದಾರೆ ಎನ್ನುವುದನ್ನು ಸೂಚಿಸುವಂಥ ಘಟನೆಗಳು ನಡೆಯುತ್ತಿವೆ. ವಿಶ್ವಕಪ್ ಗೆಲ್ಲಲು ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಈ ಬಗ್ಗೆ ಅವರು ಯಾವುದೇ ಪೋಸ್ಟ್ ಹಾಕಿಲ್ಲ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈಗ ಅವರು ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಪರೋಕ್ಷವಾಗಿ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.
ನತಾಶಾ ಕ್ರೈಸ್ತ ಧರ್ಮದವರು. ಹೀಗಾಗಿ ಅವರು ಆಗಾಗ ಏಸು ಹೇಳಿದ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಬೈಬಲ್ನಲ್ಲಿ ಏನು ಬರೆಯಲಾಗಿದೆ ಎಂಬುದನ್ನು ವಿವರಿಸುತ್ತಾರೆ. ಈಗ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬೈಬಲ್ನಲ್ಲಿ ಬರೆಯಲಾದ ಕೆಲವು ಸಾಲುಗಳನ್ನು ಓದಿದ್ದಾರೆ.
‘ಇಂದು ನಾನು ಕೆಲವು ಸಾಲುಗಳನ್ನು ಓದಲು ಉತ್ಸುಕನಾಗಿದ್ದೇನೆ. ಅದಕ್ಕಾಗಿಯೇ ನಾನು ಬೈಬಲ್ ಅನ್ನು ನನ್ನೊಂದಿಗೆ ಕಾರಿನಲ್ಲಿ ತಂದಿದ್ದೇನೆ. ಅಲ್ಲಿ ಹೀಗೆ ಬರೆದಿದೆ.. ಭಗವಂತ ನಿಮ್ಮೊಂದಿಗೆ ಸದಾ ಇರುತ್ತಾನೆ. ಆತನು ನಿಮ್ಮನ್ನು ಎಂದಿಗೂ ಬಿಡುವುದಿಲ್ಲ ಅಥವಾ ತೊರೆಯುವುದಿಲ್ಲ. ನೀವು ಭಯಪಡಬೇಡಿ ಅಥವಾ ನಿರಾಶೆಗೊಳ್ಳಬೇಡಿ. ನಾವು ಯಾವುದಾದರೂ ತೊಂದರೆ ಅನುಭವಿಸುತ್ತಿದ್ದರೆ ನಾವು ನಿರುತ್ಸಾಹಗೊಳ್ಳುತ್ತೇವೆ, ನಿರಾಶೆಗೊಳ್ಳುತ್ತೇವೆ, ದುಃಖಿತರಾಗುತ್ತೇವೆ, ಆಗಾಗ ಕಳೆದುಹೋಗುತ್ತೇವೆ. ಆದರೆ, ದೇವರು ನಿಮ್ಮೊಂದಿಗಿದ್ದಾನೆ. ನೀವು ಏನು ಮಾಡುತ್ತಿದ್ದೀರಿ ಎನ್ನುವ ಬಗ್ಗೆ ಆತ ಯೋಚಿಸುವುದಿಲ್ಲ. ಏಕೆಂದರೆ ಈಗಾಗಲೇ ಆತ ಕೆಲವು ಪ್ಲ್ಯಾನ್ಗಳನ್ನು ಹಾಕಿದ್ದಾನೆ’ ಎಂದಿದ್ದಾರೆ ಅವರು. ಅವರು ಹೇಳಿರುವ ಸಾಲುಗಳು ವಿಚ್ಛೇದನಕ್ಕೆ ಸಂಬಂಧಿಸಿವೆ ಎಂದು ಕೆಲವರು ಊಹಿಸಿದ್ದಾರೆ.
ನತಾಶಾ ಅವರ ನಡೆ ಸಾಕಷ್ಟು ಅಚ್ಚರಿ ಮೂಡಿಸುತ್ತಿದೆ. ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ವಿಶ್ವಕಪ್ ಬಳಿಕ ಅವರು ಹಾರ್ದಿಕ್ ಬಗ್ಗೆ ಒಂದೇ ಒಂದು ಪೋಸ್ಟ್ ಮಾಡದ ಕಾರಣ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ತಮ್ಮ ಕೆಲಸವನ್ನು ಮುಂದುವರಿಸುತ್ತಿದ್ದಾರೆ.
ಇತ್ತೀಚೆಗೆ ನತಾಶಾ ಅವರು ಜಿಮ್ ಫೋಟೋಗಳು, ಡ್ರೆಸ್ನ ಫೋಟೋಗಳನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಜೊತೆಗಿನ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಾಗೆಯೇ ಇಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ನತಾಶಾ ಫಾಲೋ ಮಾಡುತ್ತಿದ್ದಾರೆ. ಹೀಗಾಗಿ ಇಬ್ಬರ ಮಧ್ಯೆ ಏನಾಗುತ್ತಿದೆ ಎಂದು ಊಹಿಸಲು ಕಷ್ಟವಾಗುತ್ತಿದೆ. ಇಬ್ಬರು ಈ ಬಗ್ಗೆ ಅಧಿಕೃತವಾಗಿ ಹೇಳುವವರೆಗೂ ಕಾಯಬೇಕಿದೆ.