ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿ ವೈಫಲ್ಯ ಕಂಡ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಆದರೆ, ಬರೋಡಾ ಆಲ್ರೌಂಡರ್ ಮುಂದಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ವಿಶ್ವಕಪ್ ಗೆದ್ದುಕೊಡಬಲ್ಲ ವಿಶೇಷ ಆಟವನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ವಿಶ್ವಾಸ ಹೊರಹಾಕಿದ್ದಾರೆ.
ಐಪಿಎಲ್ 2024 ಟೂರ್ನಿಯಲ್ಲಿ ಕೇವಲ ಕ್ಯಾಪ್ಟನ್ಸಿಯಲ್ಲಿ ಮಾತ್ರವಲ್ಲ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿಯೂ ಹಾರ್ದಿಕ್ ಪಾಂಡ್ಯ ನೀರಸ ಪ್ರದರ್ಶನ ನೀಡಿದ್ದಾರೆ. ಕಳಪೆ ಪ್ರದರ್ಶನದ ಹೊರತಾಗಿಯೂ ಟೀಮ್ ಇಂಡಿಯಾ ಸೆಲೆಕ್ಟರ್ಸ್ ಭಾರತದ ಟಿ20 ವಿಶ್ವಕಪ್ ತಂಡ ರಚಿಸುವಾಗ 15 ಆಟಗಾರರ ಬಳಗದಲ್ಲಿ ಹಾರ್ದಿಕ್ಗೆ ಸ್ಥಾನ ನೀಡಿದ್ದಾರಲ್ಲದೆ ವೈಸ್ ಕ್ಯಾಪ್ಟನ್ ಪಟ್ಟವನ್ನೂ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ಈ ಬಾರಿ ಅಂಕಪಟ್ಟಿಯ ಕೊನೇ ಸ್ಥಾನದಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತು. ಹಾರ್ದಿಕ್ ಪಾಂಡ್ಯ ಆಡಿದ 14 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 216 ರನ್ಗಳನ್ನು ಮಾತ್ರ. ಬೌಲಿಂಗ್ನಲ್ಲಿ 14 ವಿಕೆಟ್ಗಳನ್ನು ಪಡೆಯಲಷ್ಟೇ ಶಕ್ತರಾದರು. 2023ರ ಸಾಲಿನ ಐಸಿಸಿ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಗಾಯದ ಸಮಸ್ಯೆ ಎದುರಿಸಿ 6 ತಿಂಗಳ ವಿಶ್ರಾಂತಿ ಪಡೆದಿದ್ದ ಪಾಂಡ್ಯ, ಬಳಿಕ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದರು. ಆದರೆ ಶ್ರೇಷ್ಠ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
“ಸದ್ಯಕ್ಕೆ ಅವರನ್ನು ಟೀಮ್ ಇಂಡಿಯಾ ಸೇವೆಗೆ ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಬಗ್ಗೆಯೂ ಸೆಲೆಕ್ಟರ್ಸ್ ಗೌರವಿಸಿದ್ದಾರೆ. ಕೇವಲ ಐಪಿಎಲ್ ಲಯವೊಂದರ ಆಧಾರದ ಮೇಲೆ ಆಟಗಾರನ ಆಯ್ಕೆ ಮಾಡಲಾಗುವುದಿಲ್ಲ. ಐಪಿಎಲ್ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ ಎಂದು ಹಾರ್ದಿಕ್ ಪಾಂಡ್ಯ ಅವರನ್ನು ಕಡೆಗಣಿಸಲಾಗದು.
ಟೀಮ್ ಇಂಡಿಯಾ ಪರ ಅವರು ಈವರೆಗೆ ನೀಡಿರುವ ಪ್ರದರ್ಶನಗಳನ್ನು ಗಮನಿಸಿದರೆ ಅವರ ಸೇವೆ ತಂಡಕ್ಕೆ ಅತ್ಯಗತ್ಯ. ಅವರ ಬೌಲಿಂಗ್ ಸಾಮರ್ಥ್ಯ ಮತ್ತು ಫಿಟ್ನೆಸ್ ಇಲ್ಲಿ ಮುಖ್ಯವಾಗುತ್ತದೆ. ಖಂಡಿತಾ ಮುಂವರುವ ವಿಶ್ವಕಪ್ನಲ್ಲಿ ಅವರು ವಿಶೇಷ ಪ್ರದರ್ಶನ ನೀಡಲಿದ್ದಾರೆ,” ಎಂದು ಯುವರಾಜ್ ಸಿಂಗ್ ವಿಶ್ವಾಸ ಹೊರಹಾಕಿದ್ದಾರೆ.