ಬೆಂಗಳೂರು;- ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ಪಕ್ಷದ ವಿರುದ್ಧ ಸಾರ್ವಜನಿಕವಾಗಿ ಮಾತನಾಡುವಂತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಕಟ್ಟುನಿಟ್ಟಾಗಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿ, ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ, ನಿಗಮ-ಮಂಡಳಿಗಳಿಗೆ ನೇಮಕ ಹಾಗೂ ಪಕ್ಷದ ನಾಯಕರ ಹೇಳಿಕೆಗಳ ವಿಚಾರವಾಗಿ ಬುಧವಾರ ಸುದೀರ್ಘ ಚರ್ಚೆ ನಡೆಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ, “ಪಕ್ಷದ ಶಾಸಕರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ಧಿ, ರಾಜ್ಯದ ಜನರಿಗೆ ಅನುಕೂಲವಾಗುವಂತಹ ನೀತಿಗಳ ಬಗ್ಗೆ ಯೋಚಿಸಿ, ಸಲಹೆ ನೀಡುವತ್ತ ಗಮನಹರಿಸಬೇಕು. ಸಚಿವರು ತಮ್ಮ ಇಲಾಖೆ ಹಾಗೂ ಉಸ್ತುವಾರಿ ಜಿಲ್ಲೆಗಳ ಬಗ್ಗೆ ಆಲೋಚಿಸಬೇಕು. ಅಧಿಕಾರ ಹಂಚಿಕೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಂತಿಲ್ಲ. ಆ ರೀತಿ ಮಾತನಾಡುವುದು ಪಕ್ಷದ ಶಿಸ್ತು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದರು.
ಅಶಿಸ್ತಿನ ಹೇಳಿಕೆಗಳನ್ನು ಪಕ್ಷ ಸಹಿಸುವುದಿಲ್ಲ. ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಯಾರೇ ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ಈ ಸಂಬಂಧ ವಿಪ್ ಜಾರಿ ಮಾಡಬೇಕಾಗುತ್ತದೆ. ನಿಮ್ಮ ಧ್ವನಿಗೆ ಪಕ್ಷದಲ್ಲಿ ಅವಕಾಶವಿದೆ. ನೀವು ನಿಮ್ಮ ದೂರು, ಸಲಹೆ, ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಅಥವಾ ನನ್ನ ಬಳಿ ಅಥವಾ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕೇ ಹೊರತು ಸಾರ್ವಜನಿಕವಾಗಿ ಅಲ್ಲ ಎಂದರು.