ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲೂ ಟವರ್ ಫರ್ ಹಾರ್ಮೋನಿಯಸ್ ಕಾಲ್ ಬ್ಲಾಕಿಂಗ್ ಸಿಸ್ಟಂ ಅಳವಡಿಸುವ ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಇದರಿಂದ ಜೈಲಿನಿಂದಲೇ ಕರೆ ಮಾಡಿ ಬೆದರಿಕೆವೊಡ್ಡುತ್ತಿದ್ದ ಪ್ರಕರಣಗಳಿಗೆ ಇನ್ಮುಂದೆ ಬ್ರೇಕ್ ಬೀಳಲಿದೆ.
ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳವರು, ವಿಚಾರಣಾಧೀನ ಖೈದಿಗಳು ಜೈಲಿನಿಂದಲೇ ಮೊಬೈಲ್ ಮೂಲಕ ಸಂಪರ್ಕಿಸಿ ಡೀಲ್ ನಡೆಸ್ತಿದ್ದ ಆರೋಪ, ಬೆದರಿಕೆ ವೊಡ್ಡುತ್ತಿದ್ದ ಪ್ರಕರಣಗಳು ದಾಖಲಾಗಿತ್ತಿದ್ದವು. ಇದನ್ನು ತಡೆಯುವ ದೃಷ್ಠಿಯಿಂದ ಜೈಲಿನಿಂದ ಯಾವುದೇ ಮೊಬೈಲ್ ಕರೆಗಳು ಹೋಗದಂತೆ ನಿರ್ಬಂಧಿಸಲು ಟಿಹೆಚ್ಸಿಬಿ ಟವರ್ ಸಿಗ್ನಲ್ಗಳನ್ನು ಅಳವಡಿಸಲಾಗುತ್ತಿದೆ.
ಪರಪ್ಪನ ಅಗ್ರಹಾರ ಕಾರಾಗೃಹ ಆವರಣದಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ 3 ಟವರ್ಗಳನ್ನು ಸ್ಥಾಪಿಸಲಾಗುತ್ತದೆ. ಇವು ಮೊಬೈಲ್ ಜಾಮರ್ಗಳಿಗಿಂತಲೂ ಸುಧಾರಿತ ಟೆಕ್ನಾಲಜಿ ವ್ಯವಸ್ಥೆ ಹೊಂದಿವೆ. ವಿವಿಧ ಮೊಬೈಲ್ ನೆಟ್ವರ್ಕ್ ಕಂಪನಿಗಳ ಆಂಟೇನಾ ಅಳವಡಿಸಲಾಗುತ್ತದೆ. ಈ ಮೂಲಕ ಮೊಬೈಲ್ ಗಳ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ತಿಳಿದು ಬಂದಿದೆ.