ಬೆಂಗಳೂರು, ಜೂನ್ 20: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಗ್ಯಾಂಗ್ನವರು ಪೊಲೀಸರ ಅತಿಥಿಯಾಗಿದ್ದು, ತನಿಖೆ ತೀವ್ರಗೊಂಡಿದೆ. ಇದೇ ಸಮಯದಲ್ಲಿ ಕೆಲ ಸಚಿವರು ಸೇರಿ ಪ್ರಭಾವಿ ರಾಜಕಾರಣಿಗಳು ಪಕ್ಷ ಬೇಧ ಮರೆತು ದರ್ಶನ್ ಪರವಾಗಿ ತನಿಖಾಧಿಕಾರಿಗಳಿಗೆ ಫೋನ್ ಮೇಲೆ ಫೋನ್ ಮಾಡುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಹೌದು, ದರ್ಶನ್ ಅವರ ಪ್ರಕರಣದಲ್ಲಿ ಪ್ರಭಾವಿಗಳ ಒತ್ತಡವಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಆದರೆ, ಈ ಪ್ರಕರಣದಲ್ಲಿ ಯಾವುದೇ ಒತ್ತಡವಿಲ್ಲ ಎಂದು ಆಡಳಿತರೂಢ ಕಾಂಗ್ರೆಸ್ ನಾಯಕರು ಹೇಳುತ್ತಿದ್ದು, ದರ್ಶನ್ ಬಚಾವ್ ಮಾಡಲು ಹಲವು ನಾಯಕರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದು, ಕುಡಿದ ಮತ್ತಿನಲ್ಲಿ ಏನೋ ಯಡವಟ್ಟು ಮಾಡ್ಕೊಂಡುಬಿಟ್ಟಿದ್ದಾನೆ. ಅವನ ಕೆರಿಯರ್ ಹಾಳಾಗಿ ಹೋಗುತ್ತೆ. ಏನಾದರೂ ಮಾಡಿ ಎಂದು ಹಲವು ನಾಯಕರು ಮನವಿ ಮಾಡುತ್ತಿದ್ದಾರೆ. ಆದರೆ ರಾಜಕೀಯ ನಾಯಕರಿಂದ ಎಷ್ಟೇ ಒತ್ತಡ ಬಂದ್ರು ಯಾರ ಒತ್ತಡಕ್ಕೂ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅಂಡ್ ಟೀಂ ಮಣಿಯುತ್ತಿಲ್ಲ ಎಂದು ತಿಳಿಸು ಬಂದಿದೆ.
ಇನ್ನೂ ಹಲವು ರಾಜಕೀಯ ನಾಯಕರಿಂದ ಸಾಕಷ್ಟು ಒತ್ತಡದ ಕರೆಗಳು ಬರುತ್ತಿದ್ದು, ಯಾವುದೇ ಒತ್ತಡಕ್ಕೆ ಒಳಗಾಗಬೇಡಿ, ನಿಮ್ಮ ಕೆಲಸ ನೀವು ಮಾಡಿ ಎಂದು ಪೊಲೀಸ್ ಆಯುಕ್ತರು ಕೂಡ ತಿಳಿಸಿದ್ದಾರೆ.ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ನಡೆ ಕುರಿತು ಸಾಕಷ್ಟ ಪರ ವಿರೋಧ ಚರ್ಚೆ ನಡೆಯುತ್ತಿದ್ದು, ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಇಂತಹ ನಟರಿಗೆ ಬುದ್ದಿ ಕಲಿಸಬೇಕು ಎಂದು ಹಠಕ್ಕೆ ಬಿದ್ದು ತನಿಖಾ ತಂಡ ಕೆಲಸ ಮಾಡುತ್ತಿದೆ.
ನಟ ದರ್ಶನ್ ಅವರನ್ನ ಈ ಪ್ರಕರಣದಿಂದ ಬಚಾವ್ ಮಾಡಲು ಎಷ್ಟು ಒತ್ತಡಗಳು ಕೇಳಿ ಬಂದರು. ಯಾರ ಒತ್ತಡಕ್ಕೂ ಮಣಿಯದೇ ಪೊಲೀಸರು ತಮ್ಮ ಕರ್ತವ್ಯವನ್ನ ನಿಭಾಯಿಸುತ್ತಿದ್ದು, ಡಿಸಿಪಿ ಗಿರೀಶ್ ಟೀಂ ವೈಖರಿಗೆ ಇಲಾಖೆಯ ಪಡಸಾಲೆಯಲ್ಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿ ತಿರುಚಲು ವೈದ್ಯಾಧಿಕಾರಿಗಳಿಗೆ ದರ್ಶನ್ ಕಡೆಯವರು ಹಣದ ಆಮಿಷ ಒಡ್ಡಲು ಯತ್ನಿಸಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಆದರೆ ಇಂಥಾದ್ದು ನಮ್ಮ ಗಮನಕ್ಕೆ ಬಂದಿಲ್ಲ. ಪರಿಶೀಲನೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ರೇಣುಕಾಸ್ವಾಮಿಯ ಮರಣೋತ್ತರ ವರದಿ ತಿರುಚಲು ಹಣದ ಆಮಿಷ ನೀಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅಂತಹದ್ದೇನಾದರು ಇದ್ದರೆ ಅದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ನಾವ್ಯಾರೂ ಪ್ರಕರಣದ ತನಿಖೆ ವಿಚಾರದಲ್ಲಿ ಮೂಗು ತೂರಿಸಿಲ್ಲ ಎಂದು ಹೇಳಿದರು. ಹೀನಾಯವಾದ ರೀತಿಯಲ್ಲಿ ಕೊಲೆಯಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತಪಿಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಬಯಕೆ ಎಂದು ಗುಂಡೂರಾವ್ ಹೇಳಿದರು.