ಹೊಳೆನರಸೀಪುರ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯ್ರರ್ಥಿ ವಿಚಾರವಾಗಿ ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕಡೆಗೆ ಬೊಟ್ಟು ಮಾಡಿರುವ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅವರ ಮೂಲಕವೇ ಅಭ್ಯರ್ಥಿ ಹೆಸರು ಘೋಷಣೆ ಮಾಡಿಸುತ್ತೇವೆ ಎಂದಿದ್ದಾರೆ.
ಜೊತೆಗೆ ಹಾಸನ ಸ್ಪರ್ಧೆ ವಿಚಾರವಾಗಿ ಹಿರಿಯ ಮುಖಂಡ ಕೆ.ಎಂ.ರಾಜೇಗೌಡ ಅವರ ಜೊತೆ ನಾನೂ ಮಾತನಾಡಿದ್ದು, ಅವರ ಹೆಸರೇ ಫೈನಲ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ದೇವರಮುದ್ದನಹಳ್ಳಿಯಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಪ್ರಶ್ನೆ ಬಂದಾಗ, ಪ್ರವಾಸದ ವೇಳೆ ನನ್ನದೇ ಆದ ರೀತಿಯಲ್ಲಿ ಮಾಹಿತಿ ಸಂಗ್ರಹ ಮಾಡಿದ್ದೇನೆ. ಈ ವಿಷಯ ದೇವೇಗೌಡರ ಮುಂದೆಯೂ ಚರ್ಚೆ ಆಗಿದೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ಅವರ ಮೂಲಕವೇ ಅಭ್ಯರ್ಥಿ ಹೆಸರು ಘೋಷಣೆ ಮಾಡಿಸುವೆ ಎಂದರು.
ಹಾಸನದಲ್ಲಿರುವುದುದೇವೇಗೌಡರಬಣ
ಹಾಸನ ಜೆಡಿಎಸ್ನಲ್ಲಿ ಯಾವ ಬಣವೂ ಇಲ್ಲ, ಅಲ್ಲಿರುವುದು ದೇವೇಗೌಡರ ಬಣ. ದೇವೇಗೌಡರ ಬಣ ಒಟ್ಟಾಗಿ ಕೆಲಸ ಮಾಡುತ್ತೆ. ಈ ಸಂಬಂಧ ಸೂಚನೆ ನೀಡಿದ್ದೇನೆ. ಯಾವ ಬಣ ಆಗಲು ಅವಕಾಶ ಕೊಡಲ್ಲ. ಹಾಸನದಲ್ಲಿ ಜೆಡಿಎಸ್ ಗೆಲ್ಲುವ ಬಗ್ಗೆ ಸೂಕ್ತ ನಿರ್ಣಯ ಮಾಡುವೆ. ಹಾಸನ ವಿಧಾನಸಭಾ ಕ್ಷೇತ್ರದ ಮತದಾರರ ವಿಶ್ವಾಸ ಗಳಿಸಲು, ಮುಖಂಡರು, ಕಾರ್ಯಕರ್ತರಲ್ಲಿ ಮಾನಸಿಕ ಧೈರ್ಯ ತುಂಬಲು ಸೂಕ್ತವಾದ ಅಭ್ಯರ್ಥಿ ನಿಲ್ಲಿಸಲು ನನ್ನದೇ ಆದ ರೀತಿ ಮಾಹಿತಿ ಸಂಗ್ರಹ ಮಾಡಿದ್ದೇನೆ ಎಂದು ಹೇಳಿದರು.
ಇದನ್ನು ರಾಷ್ಟ್ರೀಯ ಅಧ್ಯಕ್ಷರ ಜೊತೆ, ರೇವಣ್ಣ ಅವರ ಜೊತೆನೂ ಚರ್ಚೆ ಮಾಡಿ ಸಮರ್ಥ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುತ್ತೇವೆ ಎಂದು ತಿಳಿಸಿದರು.
ತ್ಯಾಗದಪ್ರಶ್ನೆಯಲ್ಲ, ಅಭ್ಯರ್ಥಿಗೆಲ್ಲಬೇಕು
ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಭವಾನಿ ರೇವಣ್ಣ ಅವರು, ನೀವು ಅಭ್ಯರ್ಥಿಯಾದರೆ ನನ್ನ ಬೆಂಬಲ ಇದೆ, ನಾನು ಟಿಕೆಟ್ ತ್ಯಾಗ ಮಾಡುವೆ ಎಂದಿದ್ದಾರೆ ಎಂಬ ಪ್ರಶ್ನೆಗೆ ಇಲ್ಲಿ ತ್ಯಾಗದ ಪ್ರಶ್ನೆ ಅಲ್ಲ, ಇಲ್ಲಿ ನನ್ನ ಅಭ್ಯರ್ಥಿ ಗೆಲ್ಲಬೇಕು. ನನ್ನ ಕಾರ್ಯಕರ್ತರು ಬಲಿಪಶು ಆಗಬಾರದು, ಅದು ನನಗೆ ಮುಖ್ಯ. ಇಲ್ಲಿ ಬೆಂಬಲ, ತ್ಯಾಗ, ಅನ್ನೋದು ಅವರವರಲ್ಲಿ ಆಂತರಿಕವಾಗಿ ನಡೆಯಬಹುದು ಅಷ್ಟೆ. ನನಗೆ ನಮ್ಮ ಕಾರ್ಯಕರ್ತರು ಉಳಿಯಬೇಕು, ಅವರು ಅನಾಥರಾಗಬಾರದು ಎಂಬುದಷ್ಟೇ ಉದ್ದೇಶ. ಆ ಹಿನ್ನೆಲೆಯಲ್ಲೇ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಹತ್ತುದಿನದಲ್ಲಿಎಲ್ಲಫೈನಲ್
ರಾಜ್ಯದಲ್ಲಿ ಇನ್ನೂ ನೂರು ಕ್ಷೇತ್ರಗಳ ಪಟ್ಟಿಯನ್ನು ಅಖೈರು ಮಾಡಬೇಕಿದೆ. ಸದ್ಯದಲ್ಲೇ ಕುಳಿತು ಮಾಡುತ್ತೇನೆ. ನನಗೂ ಸಮಯವಿಲ್ಲ, ಕಾಲಿಗೆ ಚಕ್ರ ಕಟ್ಕಂಡು ಓಡ್ತಾ ಇದ್ದೀನಿ. ಇನ್ನೊಂದು ವಾರ, ಹತ್ತು ದಿನದಲ್ಲಿ ಹಾಸನ ಸೇರಿದಂತೆ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಫೈನಲ್ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಯಾರಿಗೂ ಅಸಮಾಧಾನ ಆಗದೆ, ಎಲ್ಲರ ಅಭಿಪ್ರಾಯ ಪಡೆದು, ಒಳ್ಳೆಯ ಬಾಂಧವ್ಯದಲ್ಲಿ ಅಭ್ಯರ್ಥಿ ಘೋಷಣೆ ಮಾಡಲು ದೇವೇಗೌಡರು ಸಮರ್ಥರಿದ್ದಾರೆ. ಅವರ ಮೂಲಕವೇ ಘೋಷಣೆ ಮಾಡಿಸುವೆ ಎಂದು ಹೇಳಿದರು.
18ರಂದುಮೈಸೂರಲ್ಲಿಸಭೆ
ಹಾಸನದಲ್ಲಿ ಪಂಚರತ್ನ ಯಾತ್ರೆ ಮಾಡಲು ಇನ್ನೂ ಟೈಂ ಇದೆ ಎಂದ ಕುಮಾರಸ್ವಾಮಿ, ಮಾರ್ಚ್ 26ರಂದು ಮೈಸೂರಿನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಇಟ್ಟಿದ್ದೇವೆ. ಈ ಸಭೆ ಯಶಸ್ವಿಗೊಳಿಸಲು 18ರಂದು ನಮ್ಮ ಎಲ್ಲಾ ಮುಖಂಡರ ಸಭೆ ಕರೆದಿದ್ದೇನೆ ಎಂದರು. ಅದಾದ ಮೇಲೆ ಏ.10ರವರೆಗೂ ಪಂಚರತ್ನ ಯಾತ್ರೆ ಕಾರ್ಯಕ್ರಮ ಮುಂದುವರಿಯಲಿದೆ ಎಂದರು.
ನಾನು 224 ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿದ್ದೇನೆ, ಹಾಸನ ಒಂದೇ ಅಲ್ಲಾ, ಈ ಜಿಲ್ಲೆಯನ್ನು ಸ್ವಲ್ಪ ವಿಶೇಷವಾಗಿ ತೆಗೆದುಕೊಂಡಿದ್ದೇನೆ. ಇದಕ್ಕಾಗಿ ರೇವಣ್ಣ ಅವರ ಜೊತೆ ಕೈಜೋಡಿಸುತ್ತೇನೆ. ಏಕೆಂದರೆ ನಾನು ಏಳಕ್ಕೆ, ಏಳು ಸ್ಥಾನ ಗೆಲ್ಲಬೇಕು. ಆ ದೃಷ್ಟಿಯಿಂದ ಗಮನ ಹರಿಸುವೆ. ಇದರ ಕ್ರೆಡಿಟ್ ರೇವಣ್ಣ ಅವರಿಗೆ ಹೋಗೋದು ಎಂದರು. ಅರಕಲಗೂಡು ವಿಧಾನಸಭೆ ಚುನಾವಣೆ ಒನ್ ಸೈಡ್ ಆಗಲಿದೆ. ಯಾವುದೇ ಸಮಸ್ಯೆ ಇಲ್ಲ. ದೇವೇಗೌಡರ ಭಾರ ಕಡಿಮೆ ಮಾಡಿದ ಅಲ್ಲಿನ ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎ.ಮಂಜು, ಮಾಜಿ ಎಂಎಲ್ಸಿ ರಮೇಶ್ಗೌಡ, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಪುಟ್ಟಸೋಮಪ್ಪ , ಅರಕಲಗೂಡು ತಾಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ , ಮುಖಂಡರಾದ ಡಾ.ಮೋಹನ್, ರಮೇಶ್, ಸೋಮಶೇಖರ್ ಇತರರಿದ್ದರು.
ಸಚಿವಅಶೋಕವಿರುದ್ಧಕಿಡಿ
ಇದೇ ವೇಳೆ ಜೆಡಿಎಸ್ಗೆ ೨೦ ಸೀಟು ಬಂದ್ರೆ ಹೆಚ್ಚು ಎಂಬ ಸಚಿವ ಆರ್.ಅಶೋಕ್ ಹೇಳಿಕೆಗೆ, ನಿಮ್ಮ ಮನೇಲಿ ಮೊದಲು ಏನಾಗಿದೆ ನೋಡಿಕೊಳ್ಳಿ, ಆಮೇಲೆ ಮಾತಾಡಿ, ನೀವು ವಿಶ್ವಗುರು, ಈ ರೀತಿಯ ಲಘು ಮಾತನಾಡಿ ನೀವು ೨೫ ಸ್ಥಾನಕ್ಕೆ ಇಳಿದೀರಿ ಜೋಕೆ ಎಂದು ಎಚ್ಚರಿಸಿದರು. ಬಿಜೆಪಿ ಜಾಹೀರಾತು ರಾಜಕೀಯಕ್ಕಿ ಕಿಡಿಕಾರಿದ ಮಾಜಿ ಸಿಎಂ, ಎರಡೂ ರಾಷ್ಟ್ರೀಯ ಪಕ್ಷಗಳ ಆಂತರಿಕ ಕಲಹ ಜೆಡಿಎಸ್ ಭದ್ರನೆಲೆಯೂರಿ, ೨೦೨೩ ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಸಹಕಾರಿಯಾಗಲಿದೆ ಎಂಬುದು ನನ್ನ ವಿಶ್ಲೇಷಣೆ ಮತ್ತು ಲೆಕ್ಕಾಚಾರ ಎಂದರು.