ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಯಾರಿಗೆ? ಈ ವಿಚಾರ ಇದೀಗ ದಳಪತಿಗಳಿಗೆ ದೊಡ್ಡ ಸವಾಲಾಗಿದೆ. ನನಗೇ ಟಿಕೆಟ್ ಕೊಡಿ ಅಂತಾ ರೇವಣ್ಣ ಪತ್ನಿ ಭವಾನಿ ಪಟ್ಟು ಹಿಡಿದಿದ್ದಾರೆ. ಆದ್ರೆ, ಮಾಜಿ ಶಾಸಕ ಪ್ರಕಾಶ್ ಅವರ ಮಗ ಸ್ವರೂಪ್ಗೆ ಟಿಕೆಟ್ ಕೊಡಬೇಕು ಅನ್ನೋ ಆಗ್ರಹವೂ ಇದೆ.
ಇದರ ಮಧ್ಯೆ ರಾಜೇಗೌಡರ ಹೆಸರೂ ತೂರಿ ಬಂದಿದೆ. ಮೂರನೇ ಆಕಾಂಕ್ಷಿ ಹೆಸರು ಕೇಳಿ ಬಂದರೂ ಕೂಡಾ ಸ್ವರೂಪ್ ಅವರ ಪ್ರಚಾರ ಭರದಿಂದ ಸಾಗಿದೆ..! ಹೀಗಾಗಿ, ಹಾಸನ ಅಖಾಡ ಟಿ20 ಮ್ಯಾಚ್ನಷ್ಟೇ ರೋಚಕವಾಗಿ ಬದಲಾಗಿದೆ..!
ಟಿಕೆಟ್ ಖಚಿತವಾಗದಿದ್ರೂ ಸ್ವರೂಪ್ ಪ್ರಚಾರ!
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ಅನ್ನೋದು ನಿರ್ಧಾರವೇ ಆಗಿಲ್ಲ. ಆದ್ರೂ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಶುರು ಮಾಡಿದ್ಧಾರೆ. ಈ ಮೂಲಕ ದಳಪತಿಗಳಿಗೆ ನಾನು ಹಿಂದೆ ಸರಿಯೋದಿಲ್ಲ ಅನ್ನೋ ಸಂದೇಶವನ್ನ ರವಾನೆ ಮಾಡಿದ್ಧಾರೆ. ಆದಿಚುಂಚನಗಿರಿ ಮಠದ ದೇವಾಲಯದಲ್ಲಿ ಹಾಗೂ ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸ್ವರೂಪ್ಗೆ ಕಾರ್ಯಕರ್ತರು ಭರ್ಜರಿ ಸ್ವಾಗತವನ್ನೇ ಮಾಡಿದ್ರು. ಹಾಸನದ ಎಂಜಿ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸ್ವರೂಪ್ ಬೆಂಬಲಕ್ಕೆ ನಿಂತರು. ಹಾಗೆ ನೋಡಿದ್ರೆ ಸ್ವರೂಪ್ ಅವರಿಗೆ ಕುಮಾರಸ್ವಾಮಿ ಅವರ ಬೆಂಬಲವೂ ಇದೆ. ಹೀಗಾಗಿ, ನಾನು ಯಾರಿಗೂ ಕಡಿಮೆ ಇಲ್ಲ ಅನ್ನೋ ರೀತಿ ಸ್ವರೂಪ್ ಅವರು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ, ಬಹಿರಂಗವಾಗಿ ಎಲ್ಲಿಯೂ ಕೂಡಾ ಟಿಕೆಟ್ ವಿವಾದದ ಬಗ್ಗೆ ಸ್ವರೂಪ್ ಮಾತನಾಡಿಲ್ಲ. ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಅಂತಾ ಜಾರಿ ಕೊಳ್ತಿದ್ಧಾರೆ.
ಹಾಸನ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಹೇಳೋದಾದ್ರೆ, ಇಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನೋ ವಿಚಾರದಲ್ಲಿ ರೇವಣ್ಣ ಹಾಗೂ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ಯಾ ಅನ್ನೋ ಅನುಮಾನಗಳು ಮೂಡ್ತಿವೆ. ಯಾಕಂದ್ರೆ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಭವಾನಿ ರೇವಣ್ಣ.. ತಮ್ಮ ಪತ್ನಿಗೆ ಟಿಕೆಟ್ ಕೊಡಿಸಬೇಕಾದ ಪ್ರತಿಷ್ಠೆ ಇದೀಗ ರೇವಣ್ಣ ಅವರಿಗೆ ಇದೆ. ಇದಕ್ಕಾಗಿ ತೆರೆಮರೆಯಲ್ಲಿ ರೇವಣ್ಣ ಅವರು ಕಸರತ್ತು ನಡೆಸ್ತಿದ್ದಾರೆ. ಇತ್ತ ಕುಮಾರಸ್ವಾಮಿ ಅವರಿಗೆ ಸ್ವರೂಪ್ ಪರ ಒಲವು ಇರೋದು ಮೇಲ್ನೋಟಕ್ಕೆ ಕಂಡು ಬರ್ತಿದೆ. ಆದ್ರೆ, ಯಾರ ಹೆಸರನ್ನೂ ಹೇಳದ ಅವರು, ಹಾಸನದಲ್ಲಿ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡ್ತೇವೆ ಅಂತಾ ಹೇಳ್ತಿದ್ದಾರೆ. ಇಡೀ ರಾಜ್ಯಾದ್ಯಂತ ಬಹುತೇಕ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ ಆಗಿದೆ. ಹಾಸನ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಹೇಳೋದಾದ್ರೆ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುತ್ತೆ ಅಂತಾ ಕುಮಾರಸ್ವಾಮಿ ಪದೇ ಪದೇ ಹೇಳ್ತಿದ್ಧಾರೆ.