ನವದೆಹಲಿ: ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್, ಸದ್ಯ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ಅವರ ಮೇಲೆ ಹಲವರು ಟೀಕಾ ಪ್ರಹಾರವನ್ನೇ ನಡೆಸುತ್ತಿದ್ದಾರೆ. ಇನ್ನು ಇದೆಲ್ಲದರ ನಡುವೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್, ಕೆ ಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಕೆ ಎಲ್ ರಾಹುಲ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಾ ಬಂದಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯದಲ್ಲೂ ರಾಹುಲ್ ರನ್ ಬರ ಅನುಭವಿಸಿದ್ದಾರೆ. ಇದರ ಬೆನ್ನಲ್ಲೇ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಕ್ರಿಕೆಟಿಗರು, ರಾಹುಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿರುವ ಬಗ್ಗೆ ಪ್ರಶ್ನೆ ಎತ್ತಿದ್ದರು.
ಕೆ ಎಲ್ ರಾಹುಲ್ ಅವರನ್ನು ತಂಡದಿಂದ ಹೊರಗಿಟ್ಟು, ಫಾರ್ಮ್‌ನಲ್ಲಿರುವ ಶುಭ್‌ಮನ್ ಗಿಲ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿ ಎನ್ನುವ ಆಗ್ರಹ ಕೂಡಾ ಜೋರಾಗಿದೆ. ಇದೆಲ್ಲದರ ನಡುವೆ, ಈ ವಿಚಾರಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಅವರೊಬ್ಬ ವಿಶ್ವದರ್ಜೆಯ ಆಟಗಾರನಾಗಿದ್ದು, ಆದಷ್ಟು ಬೇಗ ಬಲಿಷ್ಠವಾಗಿಯೇ ಕಮ್‌ಬ್ಯಾಕ್ ಮಾಡಲಿದ್ದಾರೆ. ಅಭಿಮಾನಿಗಳು ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಸಲಹೆ ನೀಡಿದ್ದಾರೆ.
“ನಾವು ಕೆ ಎಲ್ ರಾಹುಲ್ ಅವರನ್ನು ಏಕಾಂಗಿಯಾಗಿ ಬಿಡಲು ಸಾಧ್ಯವಿಲ್ಲವೇ?. ಅವರೇನು ಅಪರಾಧವನ್ನು ಮಾಡಿಲ್ಲ. ಅವರು ಈಗಲೂ ಅತ್ಯುತ್ತಮ ಆಟಗಾರ. ಅವರು ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾವೆಲ್ಲರೂ ಈ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಈ ವಿಚಾರದಲ್ಲಿ ಅವರೇ ಮೊದಲಿಗರೂ ಅಲ್ಲ ಕೊನೆಯವರೂ ಅಲ್ಲ. ಹೀಗಾಗಿ ಅವರು ನಮ್ಮ ತಂಡದ ಆಟಗಾರ ಹಾಗೂ ದಯವಿಟ್ಟ ಆತನಲ್ಲಿ ವಿಶ್ವಾಸವಿಡಿ ಎಂದು ಭಜ್ಜಿ ಟ್ವೀಟ್ ಮಾಡಿ ಕನ್ನಡಿಗ ಕೆ ಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ.