ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚಾಗಿ ಕಾಡುತ್ತಿದೆ. ಕೆಲವು ಬಗೆಯ ಕ್ಯಾನ್ಸರ್ ಮೊದಲ ಹಂತದಲ್ಲೇ ಕೆಲವು ಲಕ್ಷಣಗಳನ್ನು ತೋರಿಸುತ್ತದೆ ಇನ್ಕೆಲವು ರೀತಿಯ ಕ್ಯಾನ್ಸರ್ ಅನ್ನು ಬೇಗ ಗುರುತಿಸಲು ಸಾಧ್ಯವಾಗುವುದಿಲ್ಲ.
ಅವು ಯಾವುದೇ ರೀತಿಯ ರೋಗಲಕ್ಷಣಗಳನ್ನೂ ಹೊಂದಿರುವುದಿಲ್ಲ. ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಇರುವ ಕ್ಯಾನ್ಸರ್ ಪೈಕಿ ಕೊಲೊರೆಕ್ಟಲ್ ಕ್ಯಾನ್ಸರ್ ಕೂಡ ಒಂದು. ಕೊಲೊರೆಕ್ಟಲ್ ಕ್ಯಾನ್ಸರ್ ಗೆ ಒಳಗಾದ ವ್ಯಕ್ತಿ ಪ್ರಾಥಮಿಕ ಹಂತದಲ್ಲಿ ಯಾವುದೇ ಗುಣಲಕ್ಷಣಗಳನ್ನು ಹೊಂದುವುದಿಲ್ಲ. ಹಾಗೊಮ್ಮೆ ಅದು ಕೆಲವು ಲಕ್ಷಣಗಳನ್ನು ತೋರಿಸಿದರೂ ಅದು ಸಾಮಾನ್ಯ ಸಂಗತಿಯೆಂದು ಅನೇಕ ಮಂದಿ ಕಡೆಗಣಿಸುತ್ತಾರೆ. ಜೋ ಫರಾಟ್ಜಿಸ್ ಎನ್ನುವ ವ್ಯಕ್ತಿಯೊಬ್ಬ ಕೊಲೊರೆಕ್ಟಲ್ ಕ್ಯಾನ್ಸರ್ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕೊಲೊರೆಕ್ಟಲ್ ಕ್ಯಾನ್ಸರ್ ನ ಆರಂಭಿಕ ಚಿಹ್ನೆಗಳು, ರೋಗನಿರ್ಣಯ, ಚಿಕಿತ್ಸೆಯ ಬಗ್ಗೆ ಅವರು ಹೇಳಿದ್ದಾರೆ.
34 ವರ್ಷದ ಜೋ ಫರಾಟ್ಜಿಸ್ ಅವರಿಗೆ ಮೊದಮೊದಲು ಹೊಟ್ಟೆನೋವು ಕಾಣಿಸಿಕೊಳ್ಳಲು ಆರಂಭವಾಯಿತು. ಅವರು ಬಾಗಿದಾಗಲೆಲ್ಲ ಹೊಟ್ಟೆಯ ಕೆಳಗಡೆ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಈ ರೀತಿಯ ನೋವು ನಿರಂತರವಾಗಿ ಇರುತ್ತಿರಲಿಲ್ಲ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಇರುತ್ತಿತ್ತು. ಹಾಗಾಗಿ ಜೋ ಅವರು ಅದರ ಬಗ್ಗೆ ಹೆಚ್ಚು ಯೋಚಿಸಲೇ ಇಲ್ಲ. ಪ್ರಾಥಮಿಕ ಹಂತದಲ್ಲಿ ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರೂ ಜೋ ಅವರು ಅದನ್ನು ಕೂಡ ನಿರ್ಲಕ್ಷಿಸಿದರು. ಮೊದಲ ಹಂತದಲ್ಲೇ ಸಿಟಿ ಸ್ಕ್ಯಾನ್ ಗೆ ಒಳಗಾದರೆ ಬಹಳಷ್ಟು ತೊಂದರೆಗಳನ್ನು ತಪ್ಪಿಸಬಹುದಿತ್ತು ಎಂದು ಸ್ವತಃ ಜೋ ಫರಾಟ್ಜಿಸ್ ಹೇಳುತ್ತಾರೆ
ಕೊಲೊರೆಕ್ಟಲ್ ಕ್ಯಾನ್ಸರ್ ಕರುಳು ಅಥವಾ ಗುದನಾಳದ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಕಿಬ್ಬೊಟ್ಟೆ ನೋವು, ಹೊಟ್ಟೆ ನೋವು, ಮಲವಿಸರ್ಜನೆಯ ವೇಳೆ ರಕ್ತಸ್ರಾವವಾಗುವುದು ಕೊಲೊರೆಕ್ಟಲ್ ಕ್ಯಾನ್ಸರ್ ಸಂಕೇತವಾಗಿದೆ. ಅತಿಸಾರ, ಮಲಬದ್ಧತೆ ಕೂಡ ಕೊಲೊರೆಕ್ಟಲ್ ಕ್ಯಾನ್ಸರ್ ನ ಲಕ್ಷಣವಾಗಿದೆ. ಜೋ ಫರಾಟ್ಜಿಸ್ ಅವರು ಸುಮಾರು ಆರು ತಿಂಗಳ ಕಾಲ ಹೊಟ್ಟೆ ನೋವು ಅನುಭವಿಸಿದ ನಂತರ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಲದಲ್ಲಿ ರಕ್ತವು ಕಾಣಿಸಿಕೊಳ್ಳುತ್ತಿತ್ತು. ಆಗಲೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಇದಾದ ಕೆಲವು ತಿಂಗಳ ನಂತರ ಒಂದು ದಿನ ಫರಾಟ್ಜಿಸ್ ಶೌಚಾಲಯಕ್ಕೆ ಹೋದಾಗ ಸುಮಾರು ಅರ್ಧ ಕಪ್ ನಷ್ಟು ರಕ್ತ ಮಲದ ರೀತಿಯಲ್ಲಿ ಹೊರಹೋಗಿತ್ತು. ಆದರೂ ಫರಾಟ್ಜಿಸ್ ಅವರಿಗೆ ಸ್ವಲ್ಪವೂ ನೋವಿನ ಅನುಭವವಾಗಿರಲಿಲ್ಲ. ಅಷ್ಟೊಂದು ರಕ್ತ ಹೊರಹೋಗಿದ್ದರಿಂದ ಫರಾಟ್ಜಿಸ್ ವೈದ್ಯರನ್ನು ಭೇಟಿಮಾಡಲು ನಿರ್ಧರಿಸಿದರು. ವೈದ್ಯರು ಫರಾಟ್ಜಿಸ್ ಅವರ ಗುದನಾಳದ ಪರೀಕ್ಷೆಯನ್ನು ನಡೆಸಿದರು. ಅದರಲ್ಲೂ ಅವರಿಗೆ ಕೊಲೊರೆಕ್ಟಲ್ ಕ್ಯಾನ್ಸರ್ ನ ಯಾವುದೇ ಲಕ್ಷಣಗಳು ಕಾಣಿಸಲಿಲ್ಲ ಬದಲಾಗಿ ಅವರು ಫರಾಟ್ಜಿಸ್ ಅವರಿಗೆ ಮೂಲವ್ಯಾಧಿ ಇರಬಹುದು ಎಂದರು. ಒಂದು ತಿಂಗಳ ನಂತರ ಕೊಲೊನೋಸ್ಕೋಪಿ ಕೂಡ ಮಾಡಲಾಯ್ತು.
ಎಲ್ಲ ಪರೀಕ್ಷೆಗಳ ನಂತರ ಫರಾಟ್ಜಿಸ್ ಅವರು ಕರುಳಿನಲ್ಲಿ ದೊಡ್ಡ ಗಡ್ಡೆಯನ್ನು ಹೊಂದಿದ್ದಾರೆ ಮತ್ತು ಅದು ಮಾರಣಾಂತಿಕವೇ ಎಂದು ಪರೀಕ್ಷಿಸಲು ಬಯಾಪ್ಸಿ ತೆಗೆದುಕೊಳ್ಳಲಾಗಿದೆ ಎಂದು ವೈದ್ಯರು ಹೇಳಿದರು. ಇದಾದ ಮೂರು ದಿನಗಳ ನಂತರ ವೈದ್ಯರು ಫರಾಟ್ಜಿಸ್ ಅವರು ಅಡಿನೋಕಾರ್ಸಿನೋಮವನ್ನು ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.