ಅಂಕಾರ: ಒಂದೇ ದೇಹ ಎರಡು ಮುಖದೊಂದಿಗೆ ಜನಿಸಿದ ಕರುವಿನ ಬಗ್ಗೆ ಕೇಳಿದ್ದೀರ. ಹಾಗೆ ಒಂದೇ ಮೇಕೆಗೆ ಎರಡಕ್ಕಿಂತ ಹೆಚ್ಚು ಕೊಂಬುಗಳು ಇರೋ ಸ್ಟೋರಿಯನ್ನೂ ಕೇಳಿದ್ದೀರ. ಆದ್ರೆ ಕುರಿಯ ಕಿವಿಯಲ್ಲಿ ಬಾಯಿ ಬೆಳವಣಿಗೆ ಆಗಿರೋದನ್ನ ಎಲ್ಲಾದ್ರೂ ಕೇಳಿದ್ದೀರಾ? ಹೌದು. ಇಂತಹದ್ದೊಂದು ಅಪರೂಪದ ಕುರಿ ಟರ್ಕಿಯಲ್ಲಿದೆ. ಮಾಲೀಕ ಅಲಿ ದುಮಾನ್ ಒಮ್ಮೆ ಕುರಿಗಳ ಉಣ್ಣೆ ಕತ್ತರಿಸುತ್ತಿದ್ರು. ಎರಡು ಮೂರು ಕುರಿಗಳ ಉಣ್ಣೆಯನ್ನ ಕಟ್ ಮಾಡಿ ಮತ್ತೊಂದು ಕುರಿಯ ಉಣ್ಣೆ ಕಟ್ ಮಾಡುವಾಗ ಆಕಸ್ಮಿಕವಾಗಿ ಅದರ ಕಿವಿಯನ್ನ ಕಟ್ ಮಾಡಿದ್ದರು.
ನಂತರ ಗಾಬರಿಯಿಂದ ಅದರ ಕಿವಿಯನ್ನ ಪರಿಶೀಲಿಸಿದ್ದಾರೆ. ಈ ವೇಳೆ ಕುರಿಯ ಕಿವಿಯೊಳಗೆ ಬಾಯಿ ಬೆಳವಣಿಗೆಯಾಗಿರೋದನ್ನ ಕಂಡು ಅಚ್ಚರಿಗೊಂಡಿದ್ದಾರೆ. ಇದನ್ನ ನೋಡಿ ನಾನು ನಡುಗಲು ಶುರುವಾದೆ. ನಾನು ಈ ರೀತಿ ನೋಡಿರುವುದು ಇದೇ ಮೊದಲು. ಪಶುವೈದ್ಯರು ಕೂಡ ಈ ರೀತಿ ಎಂದೂ ನೋಡಿಲ್ಲ ಎಂದಿದ್ದಾರೆ ಅಂತ ಅಲಿ ಹೇಳಿದ್ದಾರೆ.
ಪಶುವೈದ್ಯರಾದ ಯೂಸಫ್ ಯಿಲ್ಡಿಸ್ ಕುರಿಯನ್ನ ಪರೀಕ್ಷಿಸಿದ್ದು, ಅದರ ಕಿವಿಯೊಳಗೆ ಬೆಳವಣಿಗೆ ಯಾಗ್ತಿರೋ ಬಾಯಿಯಲ್ಲಿ ಹಲ್ಲು ಕೂಡ ಇದ್ದು, ಅದರಿಂದ ಜೊಲ್ಲು ಕೂಡ ಉತ್ಪತ್ತಿಯಾಗುತ್ತಿದೆ ಎಂದು ಹೇಳಿದ್ದಾರೆ. ಆದ್ರೆ ಕಿವಿಯೊಳಗೆ ಬೆಳವಣಿಗೆಯಾಗಿರೋ ಬಾಯಿ ಕುರಿಯ ಜೀರ್ಣಾಂಗದೊಂದಿಗೆ ಸಂರ್ಪಕವಾಗಿಲ್ಲ ಎಂದು ಹೇಳಿದ್ದಾರೆ.
ನಾವು ಈ ರೀತಿಯ ಪ್ರಕರಣ ಹಿಂದೆಂದೂ ನೋಡಿಲ್ಲ. ಮಾಲೀಕರು ಇದನ್ನು ನೋಡಿ ಭಯಪಟ್ಟಿದ್ದಾರೆ. ಬಹುಶಃ ಕುರಿಯ ತಾಯಿ ಗರ್ಭ ಧರಿಸಿದ್ದ ವೇಳೆ ರಾಸಾಯನಿಕಗಳನ್ನ ತಿಂದು ಹೀಗಾಗಿರಬಹುದು. ಅಥವಾ ವಿಕಿರಣಗಳಿಂದಲೋ, ಹಾರ್ಮೋನಲ್ ಔಷಧಿಗಳಿಂದಲೋ ಹೀಗಾಗಿರಬಹುದು. ಈ ಬಗ್ಗೆ ಗಂಭೀರವಾಗಿ ತನಿಖೆ ಮಾಡಬೇಕು ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿರವುದಾಗಿ ಮಿರರ್ ಪತ್ರಿಕೆ ವರದಿ ಮಾಡಿದೆ.