ಮೈಸೂರು: ನಂಜನಗೂಡು (Nanjanagud) ಕಾಂಗ್ರೆಸ್ (Congress) ಟಿಕೆಟ್ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅಕ್ಷರಶಃ ಧರ್ಮ ಸಂಕಟದಲ್ಲಿದ್ದರು. ಆದರೆ, ಈಗ ಇಡೀ ವಿಚಾರ ಸಿನಿಮೀಯಾ ರೀತಿ ಬದಲಾಗಿದೆ.
ಡಾ.ಹೆಚ್.ಸಿ.ಮಹದೇವಪ್ಪ (H.C.Mahadevappa) ಅಚ್ಚರಿ ರೀತಿ ಕ್ಷೇತ್ರದ ಟಿಕೆಟ್ ರೇಸ್ನಿಂದ ಹಠಾತ್ ಆಗಿ ಹೊರ ನಡೆದಿದ್ದಾರೆ.
ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಮತ್ತು ಧ್ರುವನಾರಾಯಣ್ ನಡುವೆ ಫೈಟ್ ಸೃಷ್ಟಿಯಾಗಿತ್ತು. ಇಬ್ಬರಲ್ಲಿ ಯಾರ ಕೈ ಮೇಲಾಗುತ್ತದೋ ಎಂದು ಜನ ಕೂತೂಹಲದಿಂದ ನೋಡುತ್ತಿದ್ದ ಹೊತ್ತಿನಲ್ಲೇ ಧ್ರುವನಾರಾಯಣ್ (R.Dhruvanarayan) ಅವರು ಅಕಾಲಿಕವಾಗಿ ಮರಣ ಹೊಂದಿದ್ದರು. ಇವರ ಮರಣ ನಂತರ ಕ್ಷೇತ್ರದ ಟಿಕೆಟ್ ರೇಸ್ನ ವರಸೆಯೇ ಬದಲಾಗಿ ಬಿಟ್ಟಿತು.
ಧ್ರುವನಾರಾಯಣ್ ಅವರ ಹಠಾತ್ ನಿಧನದ ಪರಿಣಾಮ ಕ್ಷೇತ್ರದಲ್ಲಿ ಧ್ರುವನಾರಾಯಣ್ ಕುಟುಂಬದ ಪರ ಅನುಕಂಪದ ಅಲೆ ದೊಡ್ಡ ಮಟ್ಟದಲ್ಲಿ ಎದ್ದಿದೆ. ಧ್ರುವನಾರಾಯಣ್ ಪುತ್ರ ದರ್ಶನ್ಗೆ ಟಿಕೆಟ್ ಕೊಡಬೇಕೆಂಬ ಕೂಗು ಬಹು ಜೋರಾಗಿಯೆ ಕೇಳಿ ಬರುತ್ತಿದೆ.
ಯಾವಾಗ ಧ್ರುವನಾರಾಯಣ್ ಅವರ ಪುತ್ರನ ಪರ ಕೂಗು ಹೆಚ್ಚಾಯ್ತೋ, ಅನುಕಂಪದ ಅಲೆಯ ಅಬ್ಬರವೂ ಜೋರಾಯ್ತೋ ತಕ್ಷಣವೇ ಮಹದೇವಪ್ಪಗೆ ಭವಿಷ್ಯದ ಅಪಾಯ ಕಣ್ಮುಂದೆ ಬಂದಂತೆ ಕಾಣುತ್ತಿದೆ. ಅನುಕಂಪದ ಅಲೆ ಈ ಮಟ್ಟಕ್ಕೆ ಇರುವಾಗ ಅದನ್ನು ಧಿಕ್ಕರಿಸಿ ಟಿಕೆಟ್ ಪಡೆದರೆ ಅದು ಚುನಾವಣೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ ದಲಿತ ನಾಯಕ ಎನ್ನಿಸಿಕೊಂಡ ಧ್ರುವನಾರಾಯಣ್ ಅವರ ಕುಟುಂಬಕ್ಕೆ ಮಹದೇವಪ್ಪ ಅನ್ಯಾಯ ಮಾಡಿದರು ಎಂಬ ಆರೋಪ ಶಾಶ್ವತವಾಗಿ ಉಳಿದು ಬಿಡುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಎಲ್ಲವನ್ನೂ ಅಳೆದು ತೂಗಿರೋ ಹೆಚ್.ಸಿ.ಮಹದೇವಪ್ಪ ಏಕಾಏಕಿ ಮೈಸೂರಿನಲ್ಲಿನ ಧ್ರುವನಾರಾಯಣ್ ಅವರ ಮನೆಗೆ ಆಗಮಿಸಿ ಧ್ರುವನಾರಾಯಣ್ ಅವರ ಪುತ್ರನಿಗೆ ಸಾಂತ್ವನ ಹೇಳಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ನಾನು ನಂಜನಗೂಡು ಕ್ಷೇತ್ರದ ಟಿಕೆಟ್ ರೇಸ್ನಿಂದ ಹಿಂದೆ ಸರಿಯುತ್ತಿದ್ದೇನೆ. ದರ್ಶನ್ ಧ್ರುವನಾರಾಯಣ್ಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸುವ ಮೂಲಕ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ.