ಬೆಂಗಳೂರು : ತೆರೆದ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಎರಡು ವರ್ಷದ ಪುಟ್ಟ ಕಂದ ಸಾತ್ವಿಕ್ ಕೊನೆಗೂ ಸಾವು ಗೆದ್ದು ಬಂದಿದ್ದಾನೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸಿ ಮೃತ್ಯುಂಜಯನಾಗಿ ಹೊರಬಂದ ಎರಡು ವರ್ಷದ ಮಗು ಸಾತ್ವಿಕ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ.
ಅತ್ಯಂತ ಕಠಿಣ ಮತ್ತು ಸವಾಲಿನದ್ದು ಆಗಿದ್ದ ಈ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗು ಸಾತ್ವಿಕ್ ಜೀವ ಉಳಿದಿದ್ದು ನನಗೆ ಅತೀವ ಸಂತಸ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಇಡೀ ನಾಡಿಗೆ ನಾಡೇ ಋಣಿಯಾಗಿದೆ
ಮಗುವನ್ನು ರಕ್ಷಣೆ ಮಾಡಿದ ಎಲ್ಲಾ NDRF, SDRF, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗೆ ಅವರ ಪೋಷಕರು ಮಾತ್ರವಲ್ಲ, ಇಡೀ ನಾಡಿಗೆ ನಾಡೇ ಋಣಿಯಾಗಿದೆ. ಈ ಎಲ್ಲಾ ಸಿಬ್ಬಂದಿಗೆ ಅಭಿನಂದನೆಗಳು ಎಂದು ಹೆಚ್.ಡಿ. ಕುಮಾರಸ್ವಾಮಿ ಪೋಸ್ಟ್ ಮಾಡಿದ್ದಾರೆ.
ತಾತ ಶಂಕರಪ್ಪ ಕೊರೆಸಿದ್ದ ಬೋರ್ವೆಲ್
ಸಾತ್ವಿಕ್ ತಾತ ಶಂಕರಪ್ಪ ಮುಜಗೊಂಡ ಅವರು ಏಪ್ರಿಲ್ 2ರಂದು ಜಮೀನಿನಲ್ಲಿ ಬೋರ್ವೆಲ್ ಕೊರೆಸಿದ್ದರು. ಸುಮಾರು 500 ಅಡಿ ಆಳ ಕೊರೆಸಲಾಗಿತ್ತು. ಆದ್ರೆ, ನೀರು ಬಾರದ ಕಾರಣ ಮುಚ್ಚದೆ ಹಾಗೆಯೇ ಬಿಟ್ಟಿದ್ದರು. ಇದೇ ಬೋರ್ವೆಲ್ಗೆ ಮೊಮ್ಮಗ ಸಾತ್ವಿಕ್ ಬಿದ್ದಿದ್ದನು.