ಮಂಡ್ಯ:- ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮಂಡ್ಯದಿಂದ ಎಚ್ಡಿ ರೇವಣ್ಣ ಅವರು ಸಹ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅರೇ ಇದೇನಿದು ತಮ್ಮ ಕುಮಾರಸ್ವಾಮಿ ವಿರುದ್ಧವೇ ಅಣ್ಣ ರೇವಣ್ಣ ಸ್ಪರ್ಧೆ ಮಾಡುತ್ತಿದ್ದಾರಾ ಎಂದು ಅಚ್ಚರಿಯಾಗಬಹುದು. ಆದ್ರೆ, ಮಂಡ್ಯದಲ್ಲಿ ಕಣಕ್ಕಿಳಿದ ಎಚ್ಡಿ ರೇವಣ್ಣ ಬೇರೆ.
ಎಚ್.ಡಿ.ರೇವಣ್ಣ ಎಂದಾಕ್ಷಣ ಕುಮಾರಸ್ವಾಮಿ ಅವರ ಅಣ್ಣ ಎಂದು ಅನೇಕರು ಭಾವಿಸಬಹುದು. ಆದರೆ ಎಚ್ಡಿಕೆ ಸಹೋದರ ಎಚ್.ಡಿ.ರೇವಣ್ಣ ಅಲ್ಲ. ಅದೇ ಹೆಸರಿಗೆ ವ್ಯಕ್ತಿಯೊಬ್ಬರು ಸ್ಪರ್ಧೆಗಿಳಿದಿದ್ದಾರೆ. ಹೌದು.. ಎಚ್.ಡಿ.ರೇವಣ್ಣ ಹೆಸರಿನ ವ್ಯಕ್ತಿಯೊಬ್ಬರು ಮಂಡ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಹಾಸನ ಮೂಲದ ಎಚ್.ಡಿ.ರೇವಣ್ಣ ಎಂಬವರು ಪೂರ್ವಾಂಚಲ ಮಹಾಪಂಚಾಯತ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ದೊಡ್ಡೇಗೌಡರ ಪುತ್ರ ಈ ಎಚ್.ಡಿ.ರೇವಣ್ಣ ಅವರು ಎರಡು ಲಕ್ಷ ರೂಪಾಯಿ ನಗದು ಸೇರಿದಂತೆ ಒಟ್ಟು ಆರು ಲಕ್ಷ ಮೌಲ್ಯದ ಆಸ್ತಿ ಇರುವುದಾಗಿ ತಮ್ಮ ಅಫಿಡೆವಿಟ್ನಲ್ಲಿ ತಿಳಿಸಿದ್ದಾರೆ. ಇನ್ನು ಕುಮಾರಸ್ವಾಮಿ ವಿರುದ್ಧ ಎಚ್ಡಿ ರೇವಣ್ಣ ಅವರ ಸ್ಪರ್ಧೆ ಒಂದು ರೀತಿಯಾಗಿ ರಾಜಕೀಯ ತಂತ್ರ. ಒಂದೇ ಹೆಸರಿನ ಮತ್ತೊಬ್ಬನನ್ನು ಕಳ್ಳಿಸುವುದು, ಒಂದು ರೀತಿ ಇರುವ ವ್ಯಕ್ತಿಯನ್ನು ಚುನಾವಣೆಗೆ ಕರೆತರುವುದು ಸಾಮಾನ್ಯ.
ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲೂ ಸಹ ಡಾ ಸಿಎನ್ ಮಂಜುನಾಥ್ ಹೆಸರಿನ ಮತ್ತೋರ್ವ ವ್ಯಕ್ತಿ ಸಹ ನಾಮಪತ್ರ ಸಲ್ಲಿಸಿದ್ದಾರೆ. ಖ್ಯಾದ ವೈದ್ಯ ಡಾ.ಸಿಎನ್ ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರೆ, ಅದೇ ಹಸರಿನ ಹಾಸನ ಮೂಲದ ಮತ್ತೋರ್ವ ಡಾ ಸಿಎನ್ ಮಂಜುನಾಥ್ ಎನ್ನುವರು ಸಹ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ.