ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಿಂದ ಸಿಂಡಿಕೇಟ್ ವರ್ಗಾವಣೆ (Syndicate Transfor) ದಂಧೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮೇಲೆ ವೈಎಸ್ಟಿ ಟ್ಯಾಕ್ಸ್ (YST Tax) ಸರ್ಕಾರ ಅಂತ ಆರೋಪ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇಂದು ವಿಧಾನಸೌಧದಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರದಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಲ್ಲಿ ಸಿಂಡಿಕೇಟ್ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ.
ನಾನು ಸಿಎಂ ಆಗಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಸಾರಿಗೆ ಇಲಾಖೆ ಮತ್ತು ಸಬ್ ರಿಜಿಸ್ಟರ್ ಇಲಾಖೆಯಲ್ಲಿ ಸಿಂಡಿಕೇಟ್ ವರ್ಗಾವಣೆ ವ್ಯವಸ್ಥೆ ಇತ್ತು. ಆದರೆ ನಾನು ಇದನ್ನು ಮಾಡಿರಲಿಲ್ಲ. ಕಾಂಗ್ರೆಸ್ ನಾಯಕರೇ ಇದನ್ನು ಮಾಡುತ್ತಿದ್ದರು. ನಾನು ಕಣ್ಣು, ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದರೆ ಕಾಂಗ್ರೆಸ್ ಸಚಿವರೇ ಇದೆಲ್ಲವನ್ನೂ ಮಾಡುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಅವಧಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಲ್ಲಿ ಸಿಂಡಿಕೇಟ್ ವರ್ಗಾವಣೆ ದಂಧೆ ನಡೆಯುತ್ತಿದೆ. ವರ್ಗಾವಣೆ ಮಾಡಲು ಸಿಂಡಿಕೇಟ್ ಮಾಡಿಕೊಂಡು ವರ್ಗಾವಣೆ ಮಾಡಿ ಹಣ ಮಾಡುತ್ತಿದ್ದಾರೆ ಅಂತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.