ಕೋಲಾರ: ಕುರುಕ್ಷೇತ್ರದಲ್ಲಿ ಪಾಂಡವರಿಗೆ 14 ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಇರುತ್ತದೆ. 15 ವರ್ಷ ಕೊನೆಯಾದ ನಂತರ ಅವರಿಗೆ ಅಧಿಕಾರ ಸಿಗುತ್ತದೆ. ಹಾಗೇಯೆ ಬಹುಶಃ ನನಗೂ ಏನಾದ್ರೂ ಆ ಶಾಪ ತಟ್ಟಿದೆಯೆನೋ ಗೊತ್ತಿಲ್ಲ.
15 ವರ್ಷಗಳಿಂದಲೂ ಅಧಿಕಾರ ಇಲ್ಲ. ಹಾಗಾಗಿ ಪಾಂಡವರು ವನವಾಸವನ್ನು ಅಂತ್ಯಗೊಳಿಸಿದಂತೆ ಮುಳಬಾಗಿಲು ಕ್ಷೇತ್ರದಲ್ಲೂ ಮೇ 10 ರಂದು ವಿಮುಕ್ತಿಗೊಳಿಸುವ ಅವಕಾಶ ಬಂದಿದೆ ಎಂದು ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವ್ರು ಹೇಳಿದರು.
ಬಲಶೆಟ್ಟಹಳ್ಳಿ ಗ್ರಾಮದಲ್ಲಿ ನಮ್ಮ ನಡಿಗೆ ಪಂಚಾಯಿತಿ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಯಾವ ನಂಬಿಕೆಯ ಇಟ್ಟುಕೊಂಡು ನನ್ನನ್ನು ಮುಳಬಾಗಿಲು ಕ್ಷೇತ್ರಕ್ಕೆ ಕಳುಹಿಸಿಕೊಟ್ಟರು ನನಗೆ ಗೊತ್ತಿಲ್ಲ .
ಆದ್ರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಮೇಲೆ ನಾನು ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಬ್ಯುಸಿನೆಸ್ ನೋಡಿಕೊಳ್ಳಬೇಕಾ ಅಥವಾ ಮತಕೊಟ್ಟ ನಿಮ್ಮ ಜೊತೆ ಇರಬೇಕಾ ಎಂದು ಗೊಂದಲ ಉಂಟಾಯಿತು.
ಬ್ಯುಸಿನೆಸ್ ನನಗೆ ಬೇಕಾಗಿಲ್ಲ, ನನಗೆ ಬೇಕಿರುವುದು ನೀವೆಂದು ನಾನು ಅವತ್ತೇ ತೀರ್ಮಾನ ಮಾಡಿದೆ. ನೀವಿಟ್ಟಿರುವ ನಂಬಿಕೆಯನ್ನು ಹುಸಿ ಮಾಡುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕೊಟ್ಟಿರುವ ಮಾತನ್ನು ಉಳಿಸಿಕೊಂಡಿರುವ ಏಕೈಕ ಗಂಡೆಂದರೆ ಕುಮಾರಸ್ವಾಮಿ ಮಾತ್ರ.
ಈಗ ಕುಮಾರಸ್ವಾಮಿ ಅವರನ್ನು ನಾವು ಕೈಹಿಡಿಯಲಿಲ್ಲ ಅಂದ್ರೆ ಶ್ರೀಲಂಕಾಗೆ ಬಂದ ಪರಿಸ್ಥಿತಿ ನಮಗೂ ಬರುತ್ತೆ. ಹಾಗಾಗಿ ಮತ್ತೊಮ್ಮೆ ನಾವು ರಾಮ ರಾಜ್ಯ ನಿರ್ಮಾಣ ಮಾಡಬೇಕಾದ್ರೆ ಕುಮಾರಸ್ವಾಮಿ ಬೇಕು ಎಂದರು.
ಬಿಸಿಲು ಹೇಗೆ ನಮ್ಮನ್ನು ಸುಡುತ್ತಿದೆಯೋ ಹಾಗೇ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಚುನಾವಣಾ ಅಖಾಡ ರಂಗೇರುತ್ತಿದೆ. ಇಷ್ಟುದಿನಗಳ ಕಾಲ ನಮ್ಮ ನಡಿಗೆ ಪಂಚಾಯಿತಿ ಕಡೆಗೆ ಕಾರ್ಯಕ್ರಮ ಮುಗಿಸಿದ್ದೇವೆ. ಇನ್ಮೇಲೆ ನಮ್ಮ ನಡಿಗೆ ಮನೆ ಕಡೆಗೆ ಹಮ್ಮಿಕೊಳ್ಳುತ್ತಿದ್ದೇವೆ. ಏಪ್ರಿಲ್ 10ಕ್ಕೆ ಮುಳಬಾಗಿಲು ಕ್ಷೇತ್ರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬರುತ್ತಿದ್ದಾರೆ. ಅಂದು ಸುಮಾರು 10 ರಿಂದ 12 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಹಾಗೇ ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರಲಿದ್ದಾರೆ ಎಂದು ಹೇಳಿದರು.