ಹೊಸದಿಲ್ಲಿ: ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಗೆಲ್ಲಲಿ ಅಥವಾ ಸೋಲಲಿ ತಂಡದ ಡ್ರೆಸ್ಸಿಂಗ್ ಕೊಠಡಿಯನ್ನು ಚೆನ್ನಾಗಿ ಇಟ್ಟುಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಗುಜರಾತ್ ಟೈಟನ್ಸ್ ಆಲ್ರೌಂಡರ್ ರಾಹುಲ್ ತೆವಾಟಿಯ ತಿಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡದ ವಾತಾವರಣ ಅತ್ಯುತ್ತಮವಾಗಿದೆ. ಹೆಡ್ ಕೋಚ್ ಆಶಿಶ್ ನೆಹ್ರಾ ಹಾಗೂ ಮೆಂಟರ್ ಗ್ಯಾರಿ ಕ್ರಿಸ್ಟನ್ ಅವರನ್ನೊಳಗೊಂಡ ಕೋಚಿಂಗ್ ಸಿಬ್ಬಂದಿ ಉತ್ತಮವಾಗಿದೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಫೈನಲ್ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಆವೃತ್ತಿಯಲ್ಲಿಯೇ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
2022ರ ಯಶಸ್ಸನ್ನು 2023ರ ಟೂರ್ನಿಯಲ್ಲಿಯೂ ಗುಜರಾತ್ ಟೈಟನ್ಸ್ ತಂಡ ಮುಂದುವರಿಸಿದೆ. ತನ್ನ ಮೊದಲನೇ ಪಂದ್ಯದಲ್ಲಿ ನಾಲ್ಕು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ 179 ರನ್ ಗುರಿ ಹಿಂಬಾಲಿಸಿದ್ದ ಗುಜರಾತ್ ಪರ ನಿರ್ಣಾಯಕ ಹಂತದಲ್ಲಿ ರಾಹುಲ್ ತೆವಾಟಿಯ ಅಜೇಯ 15 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಅದರಂತೆ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿಯೂ ಗುಜರಾತ್ ಟೈಟನ್ಸ್ ತಂಡ 6 ವಿಕೆಟ್ ಗೆಲುವು ಪಡೆಯಿತು. ಅಂದಹಾಗೆ ಈ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ರಾಹುಲ್ ತೆವಾಟಿಯ, “ಕೊನೆಯ ಪಂದ್ಯದಲ್ಲಿ ನಾವು ಗೆಲುವು ಪಡೆದಿದ್ದೇವೆ. ನಮ್ಮ ಡ್ರೆಸ್ಸಿಂಗ್ ರೂಂ ವಾತಾವರಣ ಯೋಗ್ಯ ರೀತಿಯಲ್ಲಿ ಇರುತ್ತದೆ. ತಂಡ ಸೋಲಲಿ ಅಥವಾ ಗೆಲ್ಲಲಿ, ನಮ್ಮ ಡ್ರೆಸ್ಸಿಂಗ್ ರೂಂ ವಾತಾವರಣ ಯಾವಾಗಲೂ ಚೆನ್ನಾಗಿ ಇರುತ್ತದೆ. ಇದು ನಮ್ಮ ಯಶಸ್ಸಿನ ಮೂಲ ಮಂತ್ರ,” ಎಂದು ಹೇಳಿದ್ದಾರೆ.
2020 ಹಾಗೂ 2021ರ ಐಪಿಎಲ್ ಟೂರ್ನಿಗಳಲ್ಲಿ ರಾಜಸ್ಥಾನ್ ರಾಯಲ್ಸ್ ಪರ ರಾಹುಲ್ ತೆವಾಟಿಯ 18 ವಿಕೆಟ್ಗಳನ್ನು ಕಬಳಿಸಿದ್ದರು. ಆದರೆ, ಗುಜರಾತ್ ಟೈಟನ್ಸ್ ತಂಡದ ಪರ ತೆವಾಟಿಯಾ ಹೆಚ್ಚಿನದಾಗಿ ಬೌಲ್ ಮಾಡುತ್ತಿಲ್ಲ. ಆದರೆ, ಗುಜರಾತ್ ಟೈಟನ್ಸ್ ತಂಡದ ಹಲವು ನಿರ್ಣಾಯಕ ಇನಿಂಗ್ಸ್ಗಳನ್ನು ತೆವಾಟಿಯಾ ಆಡಿದ್ದರು.