ಬೀದರ್: ವಿಧಾನಸಭೆಯ ಫಲಿತಾಂಶದ (Election Result) ಬೆನ್ನಲ್ಲೇ ಗಡಿ ಜಿಲ್ಲೆ ಬೀದರ್ನ (Bidar) ಬಿಜೆಪಿಯಲ್ಲಿ (BJP) ಭಿನ್ನಮತ ಸ್ಫೋಟವಾಗಿದೆ. ನನ್ನ ಜೊತೆಗೇ ಇದ್ದುಕೊಂಡು ಬೆನ್ನಿಗೆ ಚೂರಿ ಹಾಕಿದರು ಎಂದು ಸ್ವ ಪಕ್ಷದವರ ವಿರುದ್ಧವೇ ಪರಾಜಿತ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಠಾಕೂರ್ (Ishwar Singh Thakur) ಆಕ್ರೋಶ ಹೊರ ಹಾಕಿದ್ದಾರೆ.
ಬೀದರ್ನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಈಶ್ವರ್ ಸಿಂಗ್ ಠಾಕೂರ್, ನನ್ನ ಜೊತೆಗೆ ಇದ್ದು 15 ರಿಂದ 20 ಜನ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಮುಖಂಡ ಡಿಕೆ ಸಿದ್ರಾಮ್ ಸೇರಿದಂತೆ ಹಲವರು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಭಗವಂತ್ ಖೂಬಾ ಒಂದು ಬಾರಿ ಮುಖ ತೋರಿಸಿ ಹೋದರು. ಆದರೆ ನನ್ನ ಪರವಾಗಿ ಖೂಬಾ ಕೆಲಸ ಮಾಡಿಲ್ಲ. ಬಿಜೆಪಿಯಲ್ಲಿ ಇದ್ದು ಈ ಬಾರಿ ಕೆಲವರು ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ. ಆ ತಪ್ಪು ಮಾಡಿದವರಿಗೆ ಆ ಭಗವಂತನೇ ನೋಡಿಕೊಳ್ಳುತ್ತಾನೆ ಎಂದರು.
ಪಾರ್ಟಿಯಲ್ಲಿ ಇದ್ದುಕೊಂಡೇ ಡಿಕೆ ಸಿದ್ರಾಮ್ ಮತ್ತು ಕೆಲವು ದ್ರೋಹಿಗಳು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಅಂತವರ ಪಟ್ಟಿಯನ್ನು ರಾಜ್ಯ ಸಮಿತಿಗೆ ನಾನು ಕಳಿಸಿಕೊಟ್ಟಿದ್ದೇನೆ. ನೀಚ ರಾಜಕಾರಣ ಮಾಡಲು ಹೋಗಬೇಡಿ. ನಾನು ಕೂಡಾ ಮುಂದಿನ ಎಂಪಿ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಭಗವಂತ್ ಖೂಬಾ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಪರಾಜಿತ ಬೀದರ್ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದರು.