ನವದೆಹಲಿ: ಸಂಸತ್ತಿನ ಒಳಗೆ ಹೊಗೆ ಬಾಂಬ್ ಸಿಡಿಸಿ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿರುವ 6 ಆರೋಪಿಗಳ ಪೈಕಿ ಐವರಿಗೆ ಶುಕ್ರವಾರ ಸುಳ್ಳುಪತ್ತೆ ಪರೀಕ್ಷೆ ಮತ್ತು ಮಂಪರು ಪರೀಕ್ಷೆ ನಡೆಸಲಾಗಿದೆ.
ಮೈಸೂರಿನ ಡಿ. ಮನೋರಂಜನ್, ನಾಲ್ವರು ಆರೋಪಿಗಳಾದ ಸಾಗರ್ ಶರ್ಮಾ, ಅಮೋಲ್ ಶಿಂಧೆ, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರಿಗೆ ಗುಜರಾತ್ ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮನೋರಂಜನ್ ಹಾಗೂ ಸಾಗರ್ ಅವರಿಗೆ ಹೆಚ್ಚುವರಿಯಾಗಿ ಟ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲಾಗಿದೆ.
ಈ ಪ್ರಕರಣದ ಏಕೈಕ ಮಹಿಳಾ ಆರೋಪಿಯಾಗಿರುವ ನೀಲಂ ಮಂಪರು ಪರೀಕ್ಷೆಗೆ ತನ್ನ ಒಪ್ಪಿಗೆ ನೀಡದ್ದರಿಂದ ಐವರಿಗೆ ಮಾತ್ರ ಪರೀಕ್ಷೆ ನಡೆಸಲು ದೆಹಲಿ ನ್ಯಾಯಾಲಯ ಆದೇಶಿಸಿತ್ತು. ಸಂಸತ್ ಮೇಲೆ ದಾಳಿ ನಡೆಸಲು ವರ್ಷದ ಹಿಂದೆಯೇ ಮಾಸ್ಟರ್ ಪ್ಲಾನ್ ನಡೆದಿತ್ತು.
ಸರ್ಕಾರದ ವಿರುದ್ಧ ಏನಾದರೂ ದೊಡ್ಡದು ಮಾಡಿ ಎಲ್ಲರ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಮೈಸೂರಿನಲ್ಲಿಯೇ ಮನೋರಂಜನ್ ಯೋಜನೆ ರೂಪಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು. ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.