ಮನುಷ್ಯ ಆರೋಗ್ಯವಾಗಿರಲು, ದೇಹದ ಪ್ರತಿಯೊಂದು ಭಾಗವು ಆರೋಗ್ಯಕರ ಆಗಿರಲು ಮುಖ್ಯ, ಆದರೆ ಇದು ಯಕೃತ್ತಿನಲ್ಲಿ ಬಹಳ ವಿಶೇಷ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಯಕೃತ್ತು ದೇಹದ ಸಾಕಷ್ಟು ಪ್ರಮುಖ ಮತ್ತು ದೊಡ್ಡ ಭಾಗ. ಇದು ದೇಹದಲ್ಲಿ ಅನೇಕ ವಿಷಯಗಳನ್ನು ಒಟ್ಟಿಗೆ ಕೆಲಸ ಮಾಡುವಂತೆ ಮಾಡುತ್ತೆ.
ಇದು ದೇಹದಲ್ಲಿ ಪೋಷಕಾಂಶಗಳನ್ನು ಸಂಗ್ರಹಿಸೋದರ ಜೊತೆಗೆ ರಕ್ತದಿಂದ ವಿಷಕಾರಿ ವಸ್ತುಗಳನ್ನು ತೆಗೆದು ಹಾಕಿ ಸ್ವಚ್ಛಗೊಳಿಸುತ್ತದೆ. ಗ್ಲುಕೋಸ್ ಅನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಪ್ರೋಟೀನ್ ದೇಹದಲ್ಲಿ ಪೌಷ್ಟಿಕಾಂಶದ ಪ್ರಮಾಣವನ್ನು ಸಮತೋಲನಗೊಳಿಸುತ್ತದೆ.
ಲಿವರ್ನ ಕೊಬ್ಬನ್ನು ನೈಸರ್ಗಿಕವಾಗಿ ಕರಗಿಸಬಹುದಾಗಿದೆ. ಫ್ಯಾಟಿಲಿವರ್ನ ಲಕ್ಷಣಗಳು, ಕಾರಣಗಳು, ನೈಸರ್ಗಿಕವಾದ ಪರಿಹಾರದಂಥ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಯಕೃತ್ತಿನಲ್ಲಿ ಅಧಿಕ ಕೊಬ್ಬು ಶೇಖರವಾದ ಪರಿಣಾಮ, ಯಕೃತ್ತು ಅಗಲವಾಗಿ ದೊಡ್ಡದಾಗುತ್ತದೆ. ಇದನ್ನೇ ಫ್ಯಾಟಿಲಿವರ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬೊಜ್ಜು ಇರುವವರು, ದೀರ್ಘಕಾಲದಿಂದ ಮಧುಮೇಹಿಗಳಾಗಿದ್ದವರು ಮತ್ತು ಹೆಚ್ಚು ಅಲ್ಕೋಹಾಲ್ ಸೇವಿಸುವವರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಈ ಸಮಸ್ಯೆಯ ದೂರಗಾಮಿ ಪರಿಣಾಮಗಳನ್ನು ಲಕ್ಷಿಸಿದಾಗ, ಆದಷ್ಟೂ ಶೀಘ್ರ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸೂಕ್ತ
ಆರಂಭಿಕ ಲಕ್ಷಣಗಳು ಸೌಮ್ಯವಾಗಿದ್ದು, ಗಮನಕ್ಕೆ ಬಾರದೆ ಹೋಗುವುದೇ ಹೆಚ್ಚು. ಆದರೆ ಕೊಬ್ಬು ಶೇಖರಣೆಯ ಪ್ರಮಾಣ ಹೆಚ್ಚುತ್ತಾ ಹೋದಂತೆ ಅತಿಯಾದ ಸುಸ್ತು, ಹೊಟ್ಟೆಯ ಮೇಲಿನ ಭಾಗದ ಬಲಪಕ್ಕದಲ್ಲಿ ನೋವು ಮೊದಲಿಗೆ ಕಾಣಿಸಿಕೊಳ್ಳಬಹುದು. ಸಮಸ್ಯೆ ಮುಂದುವರಿಯುತ್ತಿದ್ದಂತೆ, ನಿದ್ರಾಹೀನತೆ, ಅತಿಯಾದ ಸುಸ್ತು, ಆಲಸ್ಯ, ಹೊಟ್ಟೆ ಉಬ್ಬರಿಸಿದಂತಾಗುವುದು, ಕಾಲು ಊದಿಕೊಳ್ಳುವುದು ಮುಂತಾದ ಲಕ್ಷಣಗಳು ತೋರಬಹುದು
ಹಲವಾರು ಕಾರಣಗಳಿವೆ- ಬೊಜ್ಜು, ಅಲ್ಕೋಹಾಲ್ ಸೇವನೆ, ದೀರ್ಘಕಾಲದ ಮಧುಮೇಹ, ಅತಿಹೆಚ್ಚಿನ ಕ್ಯಾಲರಿ ಆಹಾರವನ್ನು ಸದಾ ತಿನ್ನುವುದು, ವ್ಯಾಯಾಮವಿಲ್ಲದ ಜೀವನ, ಕೆಲವು ಔಷಧಗಳ ಬೇಕಾಬಿಟ್ಟಿ ಸೇವನೆ, ಆನುವಂಶೀಯ ಕಾರಣಗಳು, ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಮುಖ್ಯ ಕಾರಣಗಳು. ಇದನ್ನೀಗ ಸರಿಪಡಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ ಎಂಬುದೀಗ ಮುಖ್ಯ ವಿಷಯ. ಈ ತೊಂದರೆ ಆರಂಭಿಕ ಹಂತಗಳಲ್ಲಿದ್ದರೆ, ಸರಿಪಡಿಸಿಕೊಳ್ಳುವ ಅವಕಾಶ ಹೆಚ್ಚು. ಹೇಗೆ ಎಂಬುದನ್ನು ನೋಡೋಣ
ತೂಕ ಇಳಿಕೆ
ಹೆಚ್ಚುವರಿ ತೂಕ ಇದ್ದವರಿಗೆ ಇದು ಅನ್ವಯವಾಗುತ್ತದೆ. ಅಧಿಕ ತೂಕ ಇದ್ದವರಿಗೆ, ಶೇ 20ರಷ್ಟು ತೂಕ ಇಳಿಸಿದರೂ ಯಕೃತ್ನ ಆರೋಗ್ಯ ಸಾಕಷ್ಟು ಸುಧಾರಿಸುತ್ತದೆ ಎಂಬುದು ವೈದ್ಯಲೋಕದ ಮಾತು. ಇದಕ್ಕಾಗಿ ಏನಕ್ಕೇನೋ ಪ್ರಯತ್ನಗಳನ್ನು ಮಾಡಿ, ಆರೋಗ್ಯವನ್ನೂ ಇನ್ನೂ ಹದಗೆಡಿಸಿಕೊಳ್ಳುವ ಬದಲು ತಿನ್ನುವ ಆಹಾರದ ಮೇಲೆ ನಿಗಾ ಇಡುವುದು ಮತ್ತು ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದು ಒಳ್ಳೆಯದು.
ಒಂದೊಮ್ಮೆ ಆಲ್ಕೋಹಾಲ್ ಸಮಸ್ಯೆಯಿಂದ ಈ ಯಕೃತ್ ಕೊಬ್ಬು ಬಂದಿದ್ದಲ್ಲ ಎಂದಾದರೆ ಆಹಾರದ ಬಗ್ಗೆ ಗಮನ ನೀಡಿ. ಸಂಸ್ಕರಿಸಿದ ಆಹಾರವನ್ನು ಸಂಪೂರ್ಣ ದೂರ ಮಾಡಿ. ಅತಿಯಾದ ಖಾರ, ಜಿಡ್ಡು ಬೇಡ. ಆರೋಗ್ಯಕರವಾದ್ದನ್ನು ತಿನ್ನುವ ಭರದಲ್ಲಿ ಸಿಕ್ಕಾಪಟ್ಟೆ ಹಣ್ಣು ತಿನ್ನಬೇಡಿ. ದಿನಕ್ಕೆ ಕೇಜಿಗಟ್ಟಲೆ ಹಣ್ಣು ತಿನ್ನುವ ಬದಲು, ಹಣ್ಣ-ತರಕಾರಿ-ಸೊಪ್ಪು-ಮೊಳಕೆಕಾಳುಗಳ ಮಿಶ್ರಣ ಒಳ್ಳೆಯ ಫಲಿತಾಂಶ ನೀಡೀತು. ಇಡೀ ಧಾನ್ಯಗಳು ಆಹಾರವಾಗಲಿ. ಮೀನು, ಬೀಜಗಳು, ಬೆಣ್ಣೆ ಹಣ್ಣಿನಂಥ ಆರೋಗ್ಯಕರ ಕೊಬ್ಬು ಬೇಕು
ಜಡ ಜೀವನಶೈಲಿಯು ಎಂಥವರಿಗಾದರೂ ರೋಗ ಅಂಟಿಸುತ್ತದೆ. ಹಾಗಾಗಿ ವಾರಕ್ಕೆ ಆರು ದಿನ, ಪ್ರತಿದಿನ ೩೦ ನಿಮಿಷಗಳಂತೆ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ಇದಕ್ಕಿಂತ ಹೆಚ್ಚಿನ ವ್ಯಾಯಾಮ ಮಾಡುತ್ತೀರಿ ಎಂದಾದರೆ ಒಳ್ಳೆಯದೆ. ಇದಕ್ಕಾಗಿ ಜಿಮ್ಗೇ ಹೋಗಬೇಕೆಂದಿಲ್ಲ. ನಿಮ್ಮಿಷ್ಟದ ಯಾವುದಾದರೂ ಮಧ್ಯಮಗತಿಯ ವ್ಯಾಯಾಮ ಆದೀತು. ಜೋರು ನಡಿಗೆ, ಯೋಗ, ಸೈಕಲ್ ಹೊಡೆಯುವುದು, ಏರೋಬಿಕ್ಸ್, ಪಿಲಾಟೆ, ಜುಂಬಾ, ಈಜು, ಯಾವುದಾದರೂ ಆಟ ಇತ್ಯಾದಿ ರೂಢಿಸಿಕೊಳ್ಳಿ
ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮೇಲೆ ನಿಯಂತ್ರಣ ಸಾಧಿಸುವುದು ಅಗತ್ಯ. ಹಣ್ಣುಗಳಲ್ಲಿನ ನೈಸರ್ಗಿಕ ಸಕ್ಕರೆಯಂಶವನ್ನು ಬಿಟ್ಟರೆ, ಬೇರಾವುದೇ ಹೆಚ್ಚುವರಿ ಸಕ್ಕರೆಯನ್ನು ಬಿಟ್ಹಾಕಿ. ಬೇಕ್ ಮಾಡಿದ ತಿನಿಸುಗಳು, ಕ್ಯಾಂಡಿ-ಚಾಕಲೇಟ್, ಐಸ್ಕ್ರೀಂ, ಎನರ್ಜಿ ಡ್ರಿಂಕ್, ಹಣ್ಣಿನ ಜ್ಯೂಸ್ಗಳು, ಸಕ್ಕರೆಭರಿತ ಯೋಗರ್ಟ್ಗಳು, ಸೋಡಾ, ಜಿಲೇಬಿ-ಕೇಸರಿಭಾತ್ನಂಥವು- ಎಲ್ಲವನ್ನೂ ಕಡಿಮೆ ಮಾಡಿ. ಯಾವುದೆಲ್ಲ ಸಾಧ್ಯವೋ ಅವುಗಳನ್ನು ಬಿಟ್ಟುಬಿಡಿ. ಹಾಗೆಯೇ ಕೊಬ್ಬಿನಂಶವನ್ನು ಕಡಿಮೆ ಮಾಡುವ ಮೂಲಕ ಕೊಲೆಸ್ಟ್ರಾಲ್ ಇಳಿಸಿ. ಇದಕ್ಕೆ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದು ಸಹ ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ