ದೇಶದ ಹಲವೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್ಗಳನ್ನು ನೀಡಲಾಗುತ್ತಿದ್ದು, ದೇಶದ ರಾಜಧಾನಿ ದೆಹಲಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರ ಸಂಕಷ್ಟ ಹೆಚ್ಚಿದೆ. ಇಂದು ಕೂಡ ದೆಹಲಿಯ ಕೆಲವು ಪ್ರದೇಶಗಳಲ್ಲಿ ವಿರಳವಾಗಿ ಮಳೆಯಾಗಬಹುದು ಎಂದು ಐಎಂಡಿ ಹೇಳಿದೆ.
ಪ್ರಸ್ತುತ ಮುಂಗಾರು ಮಳೆ ದಕ್ಷಿಣದ ಕಡೆಗೆ ಹೆಚ್ಚು ಒಲವು ತೋರುತ್ತಿದ್ದು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಕರ್ನಾಟಕದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಬಿರುಸಾದ ಮಳೆ ಸುರಿಯುತ್ತಿದೆ. ಕರಾವಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬೆಂಗಳೂರಿನಲ್ಲಿ ಕೂಡ ಸಾಧಾರಣ ಮಳೆ ಸುರಿಯಲಿದೆ.
ಇನ್ನು, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಇಂದು ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು IMD ವರದಿ ಮಾಡಿದೆ. ಇದೇ ವೇಳೆ ದೆಹಲಿಗೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದ್ದು, ಇಂದೂ ಕೂಡ ಲಘು ಮಳೆಯಾಗುವ ಸಾಧ್ಯತೆ ಇದೆ.
ಸ್ಕೈಮೆಟ್ ಹವಾಮಾನ ವರದಿಯ ಪ್ರಕಾರ ಮಾನ್ಸೂನ್ ರೇಖೆಯು ಜೈಸಲ್ಮೇರ್, ಕೋಟಾ, ಗುನಾ, ಸಾಗರ್, ಮಂಡ್ಲಾ, ಗೋಪಾಲಪುರದ ಮೂಲಕ ಹಾದುಹೋಗುತ್ತದೆ ಮತ್ತು ನಂತರ ಬಂಗಾಳ ಕೊಲ್ಲಿಯ ಮಧ್ಯದ ಮೂಲಕ ಆಗ್ನೇಯ ಕಡೆಗೆ ಹಾದುಹೋಗುತ್ತದೆ. ಆದ್ದರಿಂದ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಗುಜರಾತ್ ಕರಾವಳಿಯಿಂದ ಉತ್ತರ ಕೇರಳ ಕರಾವಳಿಯವರೆಗೂ ಟ್ರಫ್ ರೂಪುಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಈ ಕಾರಣಕ್ಕಾಗಿ, IMD ಹಲವು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಅವಧಿಯನ್ನು ಜುಲೈ 18 ರವರೆಗೆ ವಿಸ್ತರಿಸಿದೆ. ಅದೇ ಸಮಯದಲ್ಲಿ, ಜುಲೈ 19 ರ ಸುಮಾರಿಗೆ ಪಶ್ಚಿಮ ಮಧ್ಯ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಹೊಸ ಕಡಿಮೆ ಒತ್ತಡದ ಪ್ರದೇಶವು ಅಭಿವೃದ್ಧಿಗೊಳ್ಳುವ ಸಾಧ್ಯತೆಯಿದೆ. ಅದರ ನಂತರ ಬಿಹಾರ, ಉತ್ತರ ಪ್ರದೇಶ, ಬಂಗಾಳ, ಒಡಿಶಾ, ಜಾರ್ಖಂಡ್, ಸಿಕ್ಕಿಂನಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 24 ಗಂಟೆಗಳಲ್ಲಿ ಕೊಂಕಣ ಮತ್ತು ಗೋವಾ, ಗುಜರಾತ್, ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ವಿದರ್ಭ, ಮರಾಠವಾಡ, ದಕ್ಷಿಣ ಛತ್ತೀಸ್ಗಢ, ದಕ್ಷಿಣ ಮಧ್ಯಪ್ರದೇಶ, ತೆಲಂಗಾಣದ ಕೆಲವು ಭಾಗಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.
ಸಿಕ್ಕಿಂ, ಈಶಾನ್ಯ ಭಾರತ, ಕರ್ನಾಟಕದ ಒಳಭಾಗ, ಲಕ್ಷದ್ವೀಪ, ಉತ್ತರಾಖಂಡ, ಉತ್ತರ ಪ್ರದೇಶದ ತಗ್ಗು ಪ್ರದೇಶಗಳು, ಬಿಹಾರ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಜಾರ್ಖಂಡ್, ಒಡಿಶಾ, ಲಡಾಖ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ರಾಯಲಸೀಮಾ, ತಮಿಳುನಾಡು, ಪಂಜಾಬ್ ಮತ್ತು ಹರಿಯಾಣದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.