ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಭಾರೀ ಮಳೆಯ ನಡುವೆ ಖಾಸಗಿ ವಿಮಾನವೊಂದು (Private Jet Crash) ಲ್ಯಾಂಡ್ ಆಗಲು ಯತ್ನಿಸುತ್ತಿದ್ದಾಗ ಪತನಗೊಂಡಿದೆ. ವಿಮಾನದಲ್ಲಿ ಆರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸೇರಿ 8 ಮಂದಿ ಇದ್ದರು. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುರ್ತು ಸೇವೆಗಳು ತಿಳಿಸಿವೆ. ಅವರಿಗೆ ಯಾವ ಪ್ರಮಾಣದಲ್ಲಿ ಗಾಯಗಳಾಗಿವೆ ಎಂಬ ಬಗ್ಗೆ ತಿಳಿದಿಲ್ಲ. ಯಾವುದೇ ಪ್ರಾಣಹಾನಿಯಾಗಿಲ್ಲ
ಅವಘಡದಿಂದ ರನ್ವೇಯಲ್ಲಿ ಉಂಟಾಗಿದ್ದ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ಪುನರಾರಂಭಿಸಲಾಗಿದೆ. ಮಳೆಯಿಂದಾಗಿ ಜಾರುವಂತಾಗಿದ್ದ ರನ್ವೇ 27ರ ಬಳಿ ಈ ಘಟನೆ ನಡೆದಿದೆ. ವಿಮಾನವು ನೆಲಕ್ಕೆ ಅಪ್ಪಳಿಸುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖಾಸಗಿ ಜೆಟ್ ಪತನಗೊಂಡ ವೇಳೆ ರನ್ವೇಯನ್ನು ಕೆಲವು ನಿಮಿಷಗಳ ಕಾಲ ಮುಚ್ಚಲಾಯಿತು. ಈ ಸಮಯದಲ್ಲಿ ಡೆಹ್ರಾಡೂನ್ನಿಂದ ಬರುತ್ತಿದ್ದ ವಿಮಾನ – UK865 ಅನ್ನು ಗೋವಾದ ಮೋಪಾ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ವಿಸ್ತಾರಾ ಏರ್ಲೈನ್ಸ್ ತಿಳಿಸಿದೆ.
ವಿಮಾನವು ಲಿಯರ್ಜೆಟ್ 45 ಆಗಿದೆ. ಕೆನಡಾ ಮೂಲದ ಬೊಂಬಾರ್ಡಿಯರ್ ಏವಿಯೇಷನ್ನ ವಿಭಾಗವು ತಯಾರಿಸಿದ ಒಂಬತ್ತು ಆಸನಗಳ ಸೂಪರ್-ಲೈಟ್ ಬಿಸಿನೆಸ್ ಜೆಟ್ ಇದಾಗಿದೆ. ಇದು ಬೆಂಗಳೂರು ಮೂಲದ ವಿಎಸ್ಆರ್ ವೆಂಚರ್ಸ್ಗೆ ನೋಂದಾಯಿಸಲ್ಪಟ್ಟಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಾಹಿತಿ ನೀಡಿದೆ.