ಹಾಸನ:– ಭಾರೀ ಮಳೆಗೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹಲವೆಡೆ ಮಣ್ಣು ಕುಸಿತ ಕುಸಿತವಾಗಿದ್ದು ರಸ್ತೆ ಸಂಚಾರವೇ ಬಂದ್ ಆಗುವ ಆತಂಕ ಎದುರಾಗಿದೆ. ಸಕಲೇಶಫುರ ಬೈಪಾಸ್ ರಸ್ತೆಯ ಆಲೆಬೇಲೂರು ಗ್ರಾಮದ ಮೇಲ್ಸೇತುವೆ ಕುಸಿಯುವ ಬೀತಿ ಎದುರಾಗಿದೆ. ನಿರಂತರ ಮಳೆಯಿಂದ ಸೇತುವೆಯ ಸುತ್ತಲೂ ಇದೇ ರೀತಿ ಮಣ್ಣು ಕುಸಿಯುತ್ತಾ ಸಾಗಿದರೆ ಸಂಚಾರವೇ ಬಂದ್ ಆಗುವ ಸಾಧ್ಯತೆ ಇದೆ.
ಜೂನ್ ಎರಡನೇ ವಾರದಿಂದ ಜಿಲ್ಲೆಯ ವಿವಿದೆಡೆ ಮಳೆ ಆರಂಭಗೊಂಡಿದೆ. ಸಕಲೇಶಪುರ, ಆಲೂರು ಬೇಲೂರು ಸೇರಿ ವಿವಿದ ತಾಲ್ಲೂಕಿನಲ್ಲಿ ಅಬ್ಬರದ ಮಳೆಯಾಗುತ್ತಿದೆ. ಈ ನಡುವೆ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಸುರಿಯುತ್ತಿದೆ. ಅತ್ತ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಾಸದ್ಯಂತ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವುದರಿಂದ ಹಾಸನದ ಜೀವನದಿ ಹೇಮಾವತಿ ಉಕ್ಕಿ ಹರಿಯುತ್ತಿದೆ. ಕೇವಲ ಒಂದು ತಿಂಗಳ ಹಿಂದೆ ಬೀಕರ ಬರಗಾಲದಿಂದ ಹರಿವನ್ನೇ ನಿಲ್ಲಿಸಿದ್ದ ನದಿ ಈಗ ತುಂಬಿ ಹರಿಯುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.