ಪಾಕಿಸ್ತಾನ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಪ್ರಧಾನಿಯಾಗಲು ಸಹಾಯ ಮಾಡಿ ನಾನು ತಪ್ಪು ಮಾಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ವಿಷಾದ ವ್ಯಕ್ತಪಡಿಸಿದ್ದಾರೆ.
ಎಆರ್ಐ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರು ಪಿಟಿಐ ಅಧ್ಯಕ್ಷರಿಗೆ ಪ್ರಧಾನಿಯಾಗಲು ಸಹಾಯ ಮಾಡಿದೆ ಆದರೆ ಅವರು ಎಂದಿಗೂ ಧನ್ಯವಾದ ಹೇಳಲೇ ಇಲ್ಲ. ಅವರಿಗೆ ಪ್ರಧಾನಿಯಾಗಲು ಸಹಾಯ ಮಾಡಿ ನಾನು ತಪ್ಪು ಮಾಡಿದೆ ಎಂದು ಅನಿಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಅವರು, ನನ್ನ ತಂದೆಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ, ನಾನು ಮತ್ತು ನನ್ನ ಎಲ್ಲಾ ಸಹೋದರರು ಬೀದಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದೆವು ಎಂದಿದ್ದಾರೆ. ಜಾವೇದ್ ಮಿಯಾಂದಾದ್ ಅವರು ರಾಷ್ಟ್ರೀಯ ತಂಡಕ್ಕಾಗಿ ಆಡಿದಾಗಲೆಲ್ಲಾ ತಂಡವು ಸೋತರೆ ಕನಿಷ್ಠ ಅಂತರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆ, ಯಾವುದೇ ಆಟಗಾರರು ನನ್ನ ನಾಯಕತ್ವವನ್ನು ವಿರೋಧಿಸಲಿಲ್ಲ ಎಂದರು.
ಇಮ್ರಾನ್ ಖಾನ್ ಅವರು ಆಗಸ್ಟ್ 2018 ರಲ್ಲಿ ಪಾಕಿಸ್ತಾನದ ಪ್ರಧಾನಿಯಾದರು ಮತ್ತು 3 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದರು ಆದರೆ ಅವರು ತಮ್ಮ 4 ನೇ ವರ್ಷವನ್ನು ಪೂರ್ಣಗೊಳಿಸುವ ಮೊದಲು, ಏಪ್ರಿಲ್ 2022 ರಲ್ಲಿ, ಅವಿಶ್ವಾಸ ನಿರ್ಣಯದಿಂದ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು.