ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಬೀಸುತ್ತಿದೆ. ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತಕ್ಕೆ ಜನರು ಬೇಸತ್ತಿದ್ದು ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಇದೇವೇಳೆ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲೂ ಭ್ರಷ್ಟಾಚಾರವಾಗಿತ್ತು ಎಂಬ ಬಿಜೆಪಿ ಆರೋಪವನ್ನು ಅಲ್ಲಗೆಳೆದ ಅವರು ಹಾಗಿದ್ದರೆ ನೀವು ಯಾಕೆ ಪ್ರಶ್ನೆ ಮಾಡಲಿಲ್ಲ? ತನಿಖೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಅವರು, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಆದರೆ ಸುಭದ್ರ ಸರ್ಕಾರ ನೀಡಲು ಸಾಧ್ಯವಿಲ್ಲ. ಸುಭದ್ರ ಸರ್ಕಾರ ಇಲ್ಲದಿದ್ದರೆ ಜನರ ಆಶೋತ್ತರ ಈಡೇರಿಸಲು ಅಸಾಧ್ಯ. ಹೀಗಾಗಿ ಅತಂತ್ರ ವಿಧಾನಸಭೆಯಾಗಲು ಜನರು ತೀರ್ಪು ನೀಡಬಾರದು. ಸ್ಪಷ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಅವಕಾಶ ಕೊಡಿ ಎಂದರು.
ಯಾವುದೇ ಕಾರಣಕ್ಕೂ ಅತಂತ್ರ ವಿಧಾನಸಭೆ ಆಗಬಾರದು. 2004, 2008, 2018ರಲ್ಲಿ ಅತಂತ್ರ ವಿಧಾನಸಭೆ ಆಯಿತು. ಅತಂತ್ರ ವಿಧಾನಸಭೆ ಆದರೆ ಸುಭದ್ರ ಸರ್ಕಾರ ನೀಡಲು ಸಾಧ್ಯವಿಲ್ಲ. ಇದರಿಂದ ಜನರ ಆಶೋತ್ತರಗಳನ್ನು ಈಡೇರಿಸಲು ಆಗಲ್ಲ. 2004ರಲ್ಲಿ ಪೂರ್ಣಾವಧಿ ಸರ್ಕಾರ ಬರಲಿಲ್ಲ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ನಡೆಸಿತು. ನಂತರ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರ ಮಾಡಿ 20 ತಿಂಗಳ ಒಪ್ಪಂದ ಮಾಡಿಕೊಂಡು ಸರ್ಕಾರ ನಡೆಸಿದರು.
ಆದರೆ ಜೆಡಿಎಸ್ ಒಪ್ಪಂದದ ಪ್ರಕಾರ ನಡೆಯದ ಕಾರಣ ಬಿಜೆಪಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಸ್ವಲ್ಪಮಟ್ಟಿಗೆ ಬಿಜೆಪಿಗೆ ಅನುಕೂಲ ಆಯಿತು. 2008ರಲ್ಲಿ ಸಹ ಅತಂತ್ರ ವಿಧಾನಸಭೆ ನಿರ್ಮಾಣ ಆಯಿತು. ಬಿಜೆಪಿ ಹೆಚ್ಚು ಸ್ಥಾನ ನೀಡಿದರೂ ಸರ್ಕಾರ ರಚನೆಗೆ ಸ್ಪಷ್ಟ ಬಹುಮತ ಸಿಗಲಿಲ್ಲ. ಸ್ವತಂತ್ರವಾಗಿ ಗೆದ್ದವರನ್ನ ಪಡೆದು ಸರ್ಕಾರ ರಚಿಸಿದರು. ಮೂರು ಜನರು ಸಿಎಂಗಳಾದರು ಎಂದು ತಿಳಿಸಿದರು.