ಇಂದು ನಮಗೆಲ್ಲಾ 77 ನೇ ಸ್ವಾತಂತ್ರ್ಯ ದಿನದ ಸಂಭ್ರಮ. ಆದರೆ ಸದ್ಯದ ದಿನಮಾನಗಳಲ್ಲಿ ಇರುವವರಿಗೆ ಸ್ವಾತಂತ್ರ್ಯ ಹೇಗೆ ಪ್ರಾಪ್ತಿಯಾಯಿತು ಎಂಬುದರ ಅರಿವು ಇರಲಾರದು. ಈ ಹಿನ್ನೆಲೆಯಲ್ಲಿ ಸಂದು ಹೋದ ದಶಕಗಳಲ್ಲಿ ದೇಶ ಅಂಬೆಗಾಲು ಇಡುತ್ತಾ, ಅಮೃತಕಾಲದ ಸಂಭ್ರಮದಲ್ಲಿರುವ ದೇಶದ ಅಪ್ರತಿಮ ಸಾಧನೆಗಳ ಒಂದು ಸಿಂಹಾವಲೋಕನ ಇಲ್ಲಿದೆ.
1947 ಆ.15- ದೇಶಕ್ಕೆ ಬ್ರಿಟೀಷ್ ಆಡಳಿತದಿಂದ ಮುಕ್ತಿ. ಭಾರತ ಮತ್ತು ಪಾಕಿಸ್ತಾನ ಎಂದು 2 ದೇಶಗಳನ್ನಾಗಿ ವಿಭಜನೆ ಸ್ವಾತಂತ್ರ್ಯದ ಬಳಿಕ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡುವ ವಾಗ್ಧಾನ ಮಾಡಲಾಯಿತು.
1948- ಕಾಶ್ಮೀರ ದೇಶದ ಭಾಗವಾಯಿತು. ಅದೇ ವಿಚಾರಕ್ಕಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಕಾಶ್ಮೀರವನ್ನು ಭಾರತದ ಜತೆಗೆ ವಿಲೀನ ಮಾಡುವ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮುಕ್ತಾಯ.
1950– ಸಂವಿಧಾನ ರಚನಾ ಸಭೆ 1949ರ ನ.26ರಂದು ಸಂವಿಧಾನವನ್ನು ಅಂಗೀಕರಿಸಿತು. ಅದು ಈ ದಿನದಿಂದ ಜಾರಿಗೆ ಬಂದಿದ್ದರಿಂದ ಗಣರಾಜ್ಯದಿನ ಎಂದು ಆಚರಣೆ.
1951- ಬ್ರಿಟಿಷ್ ಸರ್ಕಾರ ಆರಂಭಿಸಿದ್ದ ರೈಲ್ವೇ ಜಾಲವನ್ನು 1951ರಲ್ಲಿ ಭಾರತ ಸರ್ಕಾರದ ನಿಯಂತ್ರಣಕ್ಕೆ ಪಡೆದುಕೊಳ್ಳಲಾಯಿತು. ಆರಂಭದಲ್ಲಿ ಮೂರು ವಲಯಗಳನ್ನಾಗಿ ವಿಂಗಡಿಸಲಾಯಿತು.ಅದೇ ವರ್ಷ ದೇಶದ ಮೊದಲ ಸಾರ್ವತ್ರಿಕ ಚುನಾವಣೆ ನಡೆಸಲಾಯಿತು. ಕಾಂಗ್ರೆಸ್ 489 ಸ್ಥಾನಗಳ ಪೈಕಿ 364ರಲ್ಲಿ ಗೆದ್ದಿತ್ತು. ಜವಾಹರ್ಲಾಲ್ ನೆಹರೂ ದೇಶದ ಮೊದಲ ಪ್ರಧಾನಿಯಾದರು.ನವದೆಹಲಿಯಲ್ಲಿ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಆಯೋಜನೆ ಮಾಡಲಾಗಿತ್ತು.
1953- ಟಾಟಾ ಸಂಸ್ಥೆಯಿಂದ ಆರಂಭಗೊಂಡಿದ್ದ ವಿಮಾನಯಾನಾ ಕಂಪನಿ ಏರ್ ಇಂಡಿಯಾವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು. ಮುಂದಿನ 40 ವರ್ಷಗಳ ಕಾಲ ದೇಶೀಯ ವಿಮಾನಯಾನದ ಪ್ರಮುಖ ಸಂಸ್ಥೆಯಾಗಿತ್ತು.
1955- ಜು.1ರಂದು ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾವನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣಗೊಳಿಸಿತು. ಆರ್ಬಿಐ ಅದರಲ್ಲಿನ ಶೇ.60ರಷ್ಟು ಪಾಲು ಪಡೆದುಕೊಂಡು ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಮರು ನಾಮಕರಣ ಮಾಡಿತು. ಅದು ಈಗ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್
1956- ಏಷ್ಯಾದ ಮೊದಲ ಅಣು ಸ್ಥಾವರವನ್ನು ಆ ವರ್ಷದ ಆ.4ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಅದಕ್ಕೆ ಅಪ್ಸರಾ ಪರಮಾಣು ಸ್ಥಾವರ ಎಂದು ಹೆಸರಿಸಲಾಗಿತ್ತು.
1958- ಆಸ್ಕರ್ ಪ್ರಶಸ್ತಿಯ ವಿದೇಶಿ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ವಿದೇಶಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮೊದಲ ಸಿನಿಮಾ “ಮದರ್ ಇಂಡಿಯಾ’ ಕಿಂಗ್ ಆಫ್ ಇಂಡಿಯನ್ ರೋಡ್ಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಂಬಾಸಿಡರ್ ಕಾರು ದೇಶದ ರಸ್ತೆಗಳಲ್ಲಿ ಸಂಚಾರ ಶುರು. ಕೋಲ್ಕತಾದ ಉತ್ತರಾಪಾರದಲ್ಲಿ ಹಿಂದುಸ್ತಾನ್ ಮೋಟರ್ಸ್ನಿಂದ ಉತ್ಪಾದನೆ. ಬ್ರಿಟಿಷ್ ಕಾರು ಉತ್ಪಾದಕ ಸಂಸ್ಥೆ ಮೋರಿಸ್ ಮೋಟರ್ಸ್ನ ಮೋರಿಸ್ ಆಕ್ಸ್ಫರ್ಡ್ ಸೀರಿಸ್3ರಿಂದ ಪ್ರೇರಿತ ಮಾಡೆಲ್
1960– ದೇಶದಲ್ಲಿ ಆಹಾರ ಉತ್ಪಾದನೆಗಾಗಿ ಹಸಿರು ಕ್ರಾಂತಿ ಶುರು. ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಮತ್ತು ಬೇಳೆ ಕಾಳುಗಳ ಉತ್ಪಾದನೆ.
1961– ವರದಕ್ಷಿಣೆ ನಿಷೇಧ ಕಾಯ್ದೆಗೆ ಸಂಸತ್ನಲ್ಲಿ ಅಂಗೀಕಾರ. ಬಹಳ ಕಾಲದಿಂದ ಜಾರಿಯಲ್ಲಿದ್ದ ಪದ್ಧತಿ ನಿಷೇಧಿಸುವ ನಿಟ್ಟಿನಲ್ಲಿ ಜು.1ರಂದು ಹೊಸ ಕಾಯ್ದೆಗೆ ಅನುಮೋದನೆ.
1963– ದೇಶದಿಂದ ಮೊದಲ ಬಾರಿಗೆ ರಾಕೆಟ್ ಉಡಾವಣೆ. 1963 ನ.21ರಂದು ತಿರುವನಂತಪುರದ ತುಂಬ ಎಂಬಲ್ಲಿಂದ ಅದನ್ನು ಉಡಾಯಿಸಲಾಗಿತ್ತು. ಅದುವೇ ದೇಶದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಶ್ರೀಕಾರ.
1968– ದೇಶಕ್ಕೆ ಮೊದಲ ಗ್ರ್ಯಾಮಿ ಅವಾರ್ಡ್ನ ಸಂಭ್ರಮ. ಪಂ.ರವಿಶಂಕರ್ ಅವರ “ವೆಸ್ಟ್ ಮೀಟ್ಸ್ ಈಸ್ಟ್’ ಗೆ ಈ ಗೌರವ. ಬೆಸ್ಟ್ ಚೇಂಬರ್ ಮ್ಯೂಸಿಕ್ ಪರ್ಫಾರ್ಮೆನ್ಸ್’ನಲ್ಲಿ ಈ ಗೌರವ.
1969– ಜು.19ರಂದು ಆ ಸಂದರ್ಭದಲ್ಲಿ ಖಾಸಗಿ ಕ್ಷೇತ್ರದಲ್ಲಿ ಇದ್ದ 14 ಬ್ಯಾಂಕ್ಗಳ ರಾಷ್ಟ್ರೀಕರಣ. ಅಲಹಾಬಾದ್ ಬ್ಯಾಂಕ್, ಕೆನರಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್.
ದೇಶದ ಮೊದಲ ವಾಣಿಜ್ಯಿಕ ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರ ಶುರು. ಅಮೆರಿಕ, ಅಂತಾರಾಷ್ಟ್ರೀಯ ಅಣು ಶಕ್ತಿ ಆಯೋಗದ ಜತೆಗಿನ ಒಪ್ಪಂದದ ಅನ್ವಯ ತಾರಾಪುರ ಅಣು ವಿದ್ಯುತ್ ಕೇಂದ್ರ ಸ್ಥಾಪಿಸಲಾಗಿತ್ತು. ಅ.29ರಂದು ಕೇಂದ್ರದಿಂದ ವಾಣಿಜ್ಯಿಕವಾಗಿ ವಿದ್ಯುತ್ ಉತ್ಪಾದನೆ ಮಾಡಿ, ಆರಂಭಿಕವಾಗಿ 210 ಮೆಗಾ ವ್ಯಾಟ್ ವಿದ್ಯುತ್ಶಕ್ತಿಯನ್ನು ಉತ್ಪಾದಿಸಲಾಯಿತು.
1970– ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಮಾಣದಲ್ಲಿ ಹಾಲು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಆಪರೇಷನ್ ಫ್ಲಡ್ ಎಂಬ ಧ್ಯೇಯ ವಾಕ್ಯದೊಂದಿಗೆ ಅದನ್ನು ಆರಂಭಿಸಲಾಗಿತ್ತು. ದಿ. ವರ್ಗೀಸ್ ಕುರಿಯನ್ ಅದಕ್ಕೆ ಕಾರಣಕರ್ತರು. ಅದರಿಂದಾಗಿ ಹಾಲಿನ ಕೊರತೆ ಎದುರಿಸುತ್ತಿದ್ದ ನಮ್ಮ ದೇಶದಲ್ಲಿ ಜಗತ್ತಿನ ಪ್ರಮುಖ ಹಾಲು ಉತ್ಪಾದನೆ ಮಾಡುವ ರಾಷ್ಟ್ರಗಳ ಸಾಲಿಗೆ ಬರುವಂತಾಯಿತು.
1974
ಪೋಖ್ರಾನ್ 1:
“ಸ್ಮೈಲಿಂಗ್ ಬುದ್ಧ’ ಎಂಬ ಕೋಡ್ನೇಮ್ನೊಂದಿಗೆ 1974ರಲ್ಲಿ ಭಾರತವು ಮೊದಲ ಪರಮಾಣು ಬಾಂಬ್ಗಳ ಪರೀಕ್ಷೆ ನಡೆಸಿದ ವರ್ಷವಿದು. ಈ ಪರೀಕ್ಷೆಯ ಮೂಲಕ ಭಾರತವು 5 ಅಣ್ವಸ್ತ್ರಸಜ್ಜಿತ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಂಡು ಇತಿಹಾಸ ನಿರ್ಮಿಸಿತು.
1974
ಸಾಗರ್ ಸಾಮ್ರಾಟ್
ಭಾರತದ ಮೊತ್ತಮೊದಲ ಕರಾವಳಿಯಾಚೆಗಿನ ತೈಲ ಬಾವಿ ಕೊರೆಯುವ ಸಾಗರ್ ಸಾಮ್ರಾಟ್ ಎಂಬ ಡ್ರಿಲ್ಲಿಂಗ್ ರಿಗ್ 1974ರಲ್ಲಿ ಮೊದಲ ತೈಲ ಬಾವಿಯನ್ನು ಕೊರೆಯಿತು. ಇದು ಮುಂಬೈ ಕರಾವಳಿಯಿಂದ ಸುಮಾರು 176 ಕಿ.ಮೀ. ದೂರದಲ್ಲಿದ್ದು, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್ಜಿಸಿ)ವು ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.
1975
ಆರ್ಯಭಟ ಉಡಾವಣೆ
ಭಾರತದ ಮೊತ್ತಮೊದಲ ಸ್ವದೇಶಿ ನಿರ್ಮಿತ ಉಪಗ್ರಹ “ಆರ್ಯಭಟ’ ಅನಾವರಣಗೊಂಡ ವರ್ಷವಿದು. ಈ ಉಪಗ್ರಹವನ್ನು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಲಾಗಿತ್ತು. ಸೋವಿಯತ್ನ ಕಾಸ್ಮೋಸ್-3ಎಂ ರಾಕೆಟ್ 1975ರ ಏ.19ರಂದು ಆರ್ಯಭಟ ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಿತು. ಎಕ್ಸ್ರೇ ಖಗೋಳಶಾಸ್ತ್ರ, ವೈಮಾನಿಕಶಾಸ್ತ್ರ ಮತ್ತು ಸೌರ ಭೌತಶಾಸ್ತ್ರದ ಅಧ್ಯಯನಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿತ್ತು.
1978
ಕಂಪ್ಯೂಟರ್ ಮಾರಾಟ:
ಭಾರತದ ಮೊದಲ ಪರ್ಸನಲ್ ಕಂಪ್ಯೂಟರ್ ಎಚ್ಸಿಎಲ್ 8ಸಿ ಮಾರಾಟವಾಗಿದ್ದು ಇದೇ ವರ್ಷ
1979
ಮಂಡಲ್ ಆಯೋಗ ರಚನೆ
ಭಾರತದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳನ್ನು ಗುರುತಿಸುವ ಉದ್ದೇಶದಿಂದ 1979ರಲ್ಲಿ ಬಿ.ಪಿ.ಮಂಡಲ್ ನೇತೃತ್ವದಲ್ಲಿ ಮಂಡಲ್ ಆಯೋಗವನ್ನು ರಚಿಸಲಾಯಿತು.
1981
ಮುಂಬೈನಲ್ಲಿ ಇನ್ಫೋಸಿಸ್ ಸಂಸ್ಥೆ ನೋಂದಣಿಯಾಗಿದ್ದು 1981ರ ಜುಲೈ 2ರಂದು. ನಂತರದಲ್ಲಿ ಈ ಸಂಸ್ಥೆಯು ಭಾರತದಲ್ಲಿ ಐಟಿ ಮತ್ತು ಬಿಪಿಒ ಸೇವೆಗಳಲ್ಲಿ ಕ್ರಾಂತಿ ಸೃಷ್ಟಿಗೆ ಕಾರಣವಾಯಿತು.
1983
ಮೊದಲ ವಿಶ್ವಕಪ್ ಕಿರೀಟ
1983ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಅನ್ನು 43 ರನ್ಗಳಿಂದ ಸೋಲಿಸಿ, ಮೊದಲು ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
1983
ಮೊದಲ ಆಸ್ಕರ್
ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಖ್ಯಾತಿಗೆ ಭಾನು ಅಥೈಯಾ ಅವರು ಪಾತ್ರರಾಗಿದ್ದು ಇದೇ ವರ್ಷ. ರಿಚರ್ಡ್ ಅಟೆನ್ಬೊರೋ ಅವರ ಸಿನಿಮಾ “ಗಾಂಧಿ’ಯಲ್ಲಿ ಅತ್ಯುತ್ತಮ ವಸ್ತ್ರ ವಿನ್ಯಾಸಕರಾಗಿ ಹೊರಹೊಮ್ಮಿದ ಭಾನು ಅವರು 1983ರಲ್ಲಿ ಅಕಾಡೆಮಿ ಪ್ರಶಸ್ತಿಗೆ ಭಾಜನರಾದರು.
1984
ಬಾಹ್ಯಾಕಾಶ ಸಾಧನೆ
ಭಾರತವು ತನ್ನ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರನ್ನು 1984ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿತು. ಸೋವಿಯತ್ ಒಕ್ಕೂಟದೊಂದಿಗಿನ ಜಂಟಿ ಯೋಜನೆ ಇದಾಗಿತ್ತು.
1984
ಭಾರತಕ್ಕೆ ಮೊದಲ ಮೆಟ್ರೋ ಪರಿಚಯವಾಗಿದ್ದು ಅಕ್ಟೋಬರ್ 24, 1984ರಲ್ಲಿ. ಕೋಲ್ಕತ್ತಾದಲ್ಲಿ 3.4 ಕಿ.ಮೀ. ದೂರವನ್ನು ಈ ಮೆಟ್ರೋ ಸಂಚರಿಸಿತ್ತು.
1986
ಅಂತರ್ಜಾಲ ಸೇವೆ ಶುರು
1986ರಲ್ಲಿ ಭಾರತದಲ್ಲಿ ಅಂತರ್ಜಾಲ ಸೇವೆ ಆರಂಭವಾಯಿತು. ಆದರೆ, ಆರಂಭದಲ್ಲಿ ಕೇವಲ ಶೈಕ್ಷಣಿಕ ಮತ್ತು ಸಂಶೋಧನಾ ಸಮುದಾಯಕ್ಕೆ ಮಾತ್ರ ಈ ಸೇವೆ ಲಭ್ಯವಾಗಿತ್ತು.
1987
ವಿಶ್ವಕಪ್ ಆತಿಥ್ಯ
ಭಾರತವು ಮೊದಲ ಬಾರಿಗೆ ವಿಶ್ವಕಪ್ ಆತಿಥ್ಯ ವಹಿಸಿದ ವರ್ಷವಿದು. 1987ರ ಕ್ರಿಕೆಟ್ ವರ್ಲ್x ಕಪ್ ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯಿತು. ಇಂಗ್ಲೆಂಡ್ನ ಹೊರಗೆ ವಿಶ್ವಕಪ್ ಪಂದ್ಯ ಆಯೋಜನೆಯಾಗಿದ್ದು ಇದೇ ಮೊದಲಾಗಿತ್ತು. ಈ ಕೂಟದಲ್ಲಿ ಆಸ್ಟ್ರೇಲಿಯಾ ತನ್ನ ಮೊಟ್ಟಮೊದಲ ಟ್ರೋಫಿಯನ್ನು ಗೆದ್ದಿತು.
1990
ಏರ್ಲಿಫ್ಟ್
ಯುದ್ಧಪೀಡಿತ ಕುವೈಟ್ನಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ಏರ್ಲಿಫ್ಟ್ ಮಾಡುವ ಕಾರ್ಯಾಚರಣೆ 1990ರ ಆಗಸ್ಟ್ 13ರಂದು ಆರಂಭವಾಗಿ 1990ರ ಅಕ್ಟೋಬರ್ 20ರವರೆಗೂ ನಡೆಯಿತು. ಸುಮಾರು 1.75 ಲಕ್ಷ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವಲ್ಲಿ ಏರ್ಇಂಡಿಯಾ ಪ್ರಮುಖ ಪಾತ್ರ ವಹಿಸಿತು.