ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನರಲ್ಲಿ ದೀರ್ಘಕಾಲದವರೆಗೆ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಎಂದರೆ ಅದು ಮಧುಮೇಹ. ರಕ್ತದಲ್ಲಿನ ಸಕ್ಕರೆ ಅಂಶ ಅಧಿಕವಾಗಿ ದೇಹದ ಸ್ವಾಸ್ಥ್ಯ ಏರುಪೇರಾಗು ಸ್ಥಿತಿಯೇ ಸಕ್ಕರೆ ಕಾಯಿಲೆ. ಸಕ್ಕರೆ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಎನ್ನುವುದಿಲ್ಲ. ದಿನನಿತ್ಯದ ಆಹಾರ ಪದ್ಧತಿ, ಜೀವನ ಪದ್ಧತಿಯಿಂದಲೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹವನ್ನು ಹತೋಟಿಗೆ ತಂದುಕೊಳ್ಳಬೇಕು.
ಅದನ್ನು ತಿನ್ನಬಾರದು, ಇದನ್ನು ತಿನ್ನಬಾರದು ಎಂದು ಹೇಳಿದರೂ ಒಂದಷ್ಟು ಮನೆಯಲ್ಲೇ ತಯಾರಿಸಿದ ಆಹಾರಗಳು ಮಧುಮೇಹ ನಿಯಂತ್ರಣಕ್ಕೆ ಮನೆಮದ್ದಿನಂತೆ ಕೆಲಸ ಮಾಡುತ್ತದೆ. ಹಾಗಾದರೆ ಮಧುಮೇಹವನ್ನು ಕಟ್ಟಿಹಾಕಲು ಮನೆಯಲ್ಲಿ ಏನು ಮಾಡಬಹುದು, ಯಾವೆಲ್ಲಾ ಆಹಾರಗಳನ್ನು ಯಾವ ರೀತಿ ಸೇವನೆ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಅರಿಶಿನ
ಸಕ್ಕರೆ ಕಾಯಿಲೆ ಇರುವವರಿಗೆ ಅರಿಶಿನ ಬೆಸ್ಟ್ ಫ್ರೆಂಡ್ ಇದ್ದ ಹಾಗೆ. ಪ್ರತಿನಿತ್ಯ ಒಂದು ಚಮಚದಷ್ಟು ಅರಿಶಿನದ ಬಳಕೆ ಇದ್ದರೆ ಮಧುಮೇಹವನ್ನು ನಿಯಂತ್ರಿಸಬಹುದು. ಅರಿಶಿನವನ್ನು ನೀವು ಜೇನುತುಪ್ಪದೊಂದಿಗೆ ಸೇವಿಸಬಹುದು. ಅರ್ಧ ಚಮಚ ಅರಿಶಿನಕ್ಕೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ಸೇವನೆ ಮಾಡಬಹುದು.
ಅಥವಾ ಅರಿಶಿನದ ಕೊಂಬು ಮತ್ತು ಬೆಟ್ಟದ ನೆಲ್ಲಿಕಾಯಿಯನ್ನು ನುಣ್ಣಗೆ ಪುಡಿ ಮಾಡಿ ಸಮಪ್ರಮಾಣದಲ್ಲಿ ಬೆರೆಸಿ ಅರ್ಧ ಚಮಚ ಪುಡಿಯನ್ನು ಸೇವಿಸಿ ಬಿಸಿ ನೀರು ಕುಡಿಯಿರಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದು ಸಕ್ಕರೆ ಕಾಯಿಲೆ ನಿಮ್ಮ ಹತೋಟಿಯಲ್ಲಿರುತ್ತದೆ.
ಬ್ರೊಕೋಲಿ
ತರಕಾರಿಗಳಲ್ಲಿ ಬ್ರೊಕೋಲಿ ಮಧುಮೇಹಕ್ಕೆ ಅತ್ಯಂತ ಉಪಕಾರಿಯಾಗಿದೆ. ನೀವು ಬ್ರೊಕೋಲಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಧುಮೇಹ ಹತೋಟಿಯಲ್ಲಿರುತ್ತದೆ.
ಬ್ರೊಕೋಲಿಯನ್ನು ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆದು ಸಲಾಡ್ ರೂಪದಲ್ಲಿ ಸೇವಿಸಬಹುದು. ಅಥವಾ ಇತರ ತರಕಾರಿಗಳೊಂದಿಗೆ ಬೇಯಿಸಿ ಪಲ್ಯ, ಸಾಂಬಾರ್ ರೂಪದಲ್ಲಿಯೂ ಸೇವನೆ ಮಾಡಬಹುದು.
ಹಾಗಲಕಾಯಿ
ಅದರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ ಹಾಗಲಕಾಯಿ ಎನ್ನುವ ಮಾತಿದೆ. ರುಚಿಯಲ್ಲಿ ಕಹಿ ನೀಡಿದರೂ ಆರೋಗ್ಯದ ದೃಷ್ಟಿಯಿಂದ ಹಾಗಲಕಾಯಿ ಬಹಳ ಒಳ್ಳೆಯದು. ಅದರಲ್ಲೂ ಮಧುಮೇಹಿಗಳಿಂತೂ ಹೇಳಿ ಮಾಡಿಸಿದ ತರಕಾರಿಯಾಗಿದೆ.
ಹಾಗಲಕಾಯಿಯ ರಸವನ್ನು ಸೇವನೆ ಮಾಡುವುದು, ವಿವಿಧ ರೀತಿಯ ಪದಾರ್ಥಗಳ ಮೂಲಕ ಆಹಾರದಲ್ಲಿ ಹಾಗಲಕಾಯಿಯನ್ನು ಸೇರಿಸಿ ಸೇವನೆ ಮಾಡಿದರೆ ಮಧುಮೇಹಕ್ಕೆ ಪ್ರಯೋಜಕಾರಿ.
ನೀವು ಹಾಗಲಕಾಯಿ ಗಿಡದ ಸೊಪ್ಪನ್ನು ಶುಚಿಗೊಳಿಸಿ ಕಷಾಯ ಮಾಡಿ ಸೇವನೆ ಮಾಡುವುದರಿಂದಲೂ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಗೋದಿ ಹುಲ್ಲು
ಅನೇಕ ಜೀವಸತ್ವಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಗೋದಿಹುಲ್ಲಿನ ಸೇವನೆ ಮಧುಮೇಹಿಗಳಿಗೆ ಪಕ್ಕಾ ಮನೆಮದ್ದು. ದೇಹಕ್ಕೆ ಹೇರಳವಾದ ಪೌಷ್ಟಿಕಾಂಶವನ್ನೂ ಈ ಗೋದಿ ಹುಲ್ಲು ನೀಡುತ್ತದೆ.
ಮಧುಮೇಹಿಗಳು ಈ ಗೋದಿ ಹುಲ್ಲಿನ ರಸವನ್ನು 21 ರಿಂದ ಒಂದು ತಿಂಗಳುಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ ದೇಹಕ್ಕೆ ಶಕ್ತಿಯೂ ಸಿಗುತ್ತದೆ.
ಬಿಲ್ವಪತ್ರೆ
ಸಾಮಾನ್ಯವಾಗಿ ಶಿವನಿಗೆ ಅರ್ಪಿಸುವ ಬಿಲ್ವಪತ್ರೆ ಎಲ್ಲರಿಗೂ ತಿಳಿದೇ ಇರುತ್ತದೆ. ಇದನ್ನು ಪೂಜೆಗೆ ಮಾತ್ರವಲ್ಲ. ಆರೋಗ್ಯಕ್ಕೂ ಸಾಕಷ್ಟು ಲಾಭಗಳನ್ನು ನೀಡುತ್ತದೆ. ಮಧುಮೇಹಿಗಳಿಗೂ ಬಿಲ್ವ ಪತ್ರೆ ಬಹಳ ಒಳ್ಳೆಯದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬಿಲ್ವಪತ್ರೆ ಮಹತ್ವದ ಪಾತ್ರ ವಹಿಸುತ್ತದೆ. ಅದಕ್ಕಾಗಿ ಅರ್ಧ ಚಮಚ ಜೇನುತುಪ್ದ ಜೊತೆಗೆ 2 ಚಮಚ ಬಿಲ್ವಪತ್ರೆ ಎಲೆಯ ರಸವನ್ನು ಮಿಶ್ರಣ ಮಾಡಿ ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಸೇವಿಸುತ್ತಾ ಬಂದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.