ದಿನಂಪ್ರತಿ ರಾಗಿ ಮುದ್ದೆ ತಿಂದು ಬೇಜಾರಾಗುವುದು ಸಹಜ. ಹೀಗಾಗಿ ಆರೋಗ್ಯಕರವಾದ ಹಾಗೂ ರುಚಿಯಾದ ಮಸಾಲೆ ಜೋಳದ ಮುದ್ದೆ ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ಇದನ್ನು ಬೇಳೆ ಸಾರು(ದಾಲ್) ಜೊತೆ ಬೆಳಗ್ಗಿನ ಉಪಹಾರ ಅಥವಾ ಮಧ್ಯಾಹ್ನದ ಊಟಕ್ಕೂ ತಿನ್ನಬಹುದು.
ಬೇಕಾಗುವ ಸಾಮಾಗ್ರಿಗಳು:
ಎಣ್ಣೆ- 1 ಟೀ ಸ್ಪೂನ್
ಸಾಸಿವೆ- ಕಾಲು ಚಮಚ
ಜೀರಿಗೆ- ಅರ್ಧ ಚಮಚ
ಬೆಳ್ಳುಳ್ಳಿ- 1 ಚಮಚ (ಸಣ್ಣಗೆ ಹೆಚ್ಚಿಕೊಳ್ಳಿ)
ಈರುಳ್ಳಿ- 1 ಟೀ ಸ್ಪೂನ್
ಟೊಮೆಟೋ- 1
ಬಟಾಣಿ- 2 ಚಮಚ
ಕ್ಯಾರೆಟ್- 2 ಚಮಚ
ಕ್ಯಾಪ್ಸಿಕಮ್- 2 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಖಾರದ ಪುಡಿ- ಅರ್ಧ ಚಮಚ
ಅರಿಶಿಣ- ಕಾಲು ಚಮಚ
ನೀರು- 2 ಕಪ್
ಕೊತ್ತಂಬರಿ ಸೊಪ್ಪು- ಸ್ವಲ್ಪ
ಜೋಳದ ಹಿಟ್ಟು- 1 ಕಪ್
ಮಾಡುವ ವಿಧಾನ:
* ಸ್ಟೌ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಒಂದು ಸ್ಪೂನ್ ಎಣ್ಣೆ ಹಾಕಿ. ಅದು ಬಿಸಿಯಾದ ಮೇಲೆ ಕಾಲು ಚಮಚ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ ಬೆರೆಸಿ ಸ್ವಲ್ಪ ಹುರಿಯಿರಿ. ನಂತರ ಇದಕ್ಕೆ ಒಂದು ಚಮಚ ಸಣ್ಣಗೆ ಹೆಚ್ಚಿರುವ ಹಸಿ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಮತ್ತೆ ಹುರಿಯಿರಿ.
* ಇದಾದ ಬಳಿಕ ಒಂದು ಚಮಚ ಸಣ್ಣಗೆ ಹೆಚ್ಚಿರುವ ಈರುಳ್ಳಿ ಹಾಕಿ ಹುರಿದು, ನಂತರ ಇದಕ್ಕೆ ಸಣ್ಣಗೆ ಹೆಚ್ಚಿರುವ ಒಂದು ಟೊಮೆಟೋವನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು. ಆ ಬಳಿಕ 3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
* ನಂತರ 2 ಚಮಚದಷ್ಟು ಬಟಾಣಿ, 2 ಸ್ಪೂನ್ ಕಟ್ ಮಾಡಿರುವ ಕ್ಯಾರೆಟ್, ಕ್ಯಾಪ್ಸಿಕಮ್ ಹಾಗೂ ಅರ್ಧ ಚಮಚ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮತ್ತೆ ಸಣ್ಣ ಉರಿಯಲ್ಲಿ ನಿಮಿಗಳ ಕಾಲ ಬೇಯಿಸಿ. ಸೀದು ಹೋಗದಂತೆ ಆಗಾಗ ಮುಚ್ಚಳ ತೆರೆದು ತಿರುವುತ್ತಾ ಇರಿ.
* ಬೆಂದ ಬಳಿಕ ಅರ್ಧ ಚಮಚ ಅಚ್ಚಖಾರದ ಪುಡಿ ಹಾಗೂ ಕಾಲು ಚಮಚ ಅರಿಶಿಣ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಎರಡು ಕಪ್ ನೀರು ಹಾಕಿ, ಜೊತೆಗೆ ಸಣ್ಣಗೆ ಹಚ್ಚಿರುವ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈ ನೀರು ಒಂದು ಕುದಿ ಬಂದ ಬಳಿಕ ಒಂದು ಕಪ್ ಜೋಳದ ಹಿಟ್ಟು ಹಾಕಿ ಗಂಟು ಆಗದಂತೆ ಚೆನ್ನಾಗಿ ಕಲಸಿಕೊಳ್ಳಿ. 5-7 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಹೀಗೆ ಚೆನ್ನಾಗಿ ಬೆಂದ ಬಳಿಕ ಮತ್ತೊಮ್ಮೆ ಕಲಸಿಕೊಂಡು ಒಂದು ದೊಡ್ಡ ಪಾತ್ರೆಗೆ ಹಾಕಿ ತಣಿಯಲು ಬಿಡಿ.
* ಇತ್ತ ಒಂದು ಪ್ಲೇಟಿಗೆ ಸ್ವಲ್ಪ ತುಪ್ಪ ಸವರಿಕೊಂಡು ಒಂದು ಮುದ್ದೆಗೆ ಬೇಕಾದ ಪ್ರಮಾಣವನ್ನು ತೆಗೆದುಕೊಂಡು ಗಂಟು ಇರದಂತೆ ಚೆನ್ನಾಗಿ ನಾದಬೇಕು. ಹೀಗೆ ಚೆನ್ನಾಗಿ ನಾದುಕೊಂಡು ಮುದ್ದೆ ಕಟ್ಟಿ ಮಧ್ಯದಲ್ಲಿ ಒಂದು ತೂತು ಮಾಡಿ ಅದಕ್ಕೆ ಸ್ವಲ್ಪ ಹಾಕಿದರೆ ಮಸಾಲೆ ಮುದ್ದೆ ಸವಿಯಲು ರೆಡಿ. ಇದನ್ನು ಬಿಸಿ ಬಿಸಿಯಾಗಿರುವ ವೇಳೆಯೇ ಬೇಳೆ ಸಾರಿನ ಜೊತೆ ಸವಿದರೆ ಸ್ವರ್ಗಕ್ಕೆ ಮೂರೇ ಗೇಣು.