ಕಾಂಗ್ರೆಸ್ನಿಂದ ಆಯ್ಕೆಯಾಗಿರುವ ಬಂಜಾರ ಸಮುದಾಯದ ಏಕೈಕ ಶಾಸಕ ರುದ್ರಪ್ಪ ಲಮಾಣಿಗೆ ದೊಡ್ಡ ಹುದ್ದೆಯೊಂದು ಹುಡುಕಿಕೊಂಡು ಬಂದಿದೆ. ಸಿದ್ದರಾಮಯ್ಯ ಸಂಪುಟ ರಚನೆ ವೇಳೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಮೂರು ಬಾರಿಯ ಶಾಸಕ ರುದ್ರಪ್ಪ ಲಮಾಣಿ ಈಗ ವಿಧಾನಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬ್ಯಾಡಗಿಯಿಂದ ಒಂದು ಬಾರಿ, ಹಾವೇರಿಯಿಂದ ಎರಡು ಬಾರಿ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಹಾಗೂ ಮುಜರಾಯಿ ಖಾತೆ ಸಚಿವರಾಗಿದ್ದರು.
ಜೂನ್ 01, 1959ರಂದು ಜನಿಸಿರುವ ರುದ್ರಪ್ಪ ಲಮಾಣಿ ಬಿಎ ಎಲ್ಎಲ್ಬಿ ಪದವಿ ಪಡೆದಿದ್ದಾರೆ. 1980ರಲ್ಲಿ ರಾಜಕೀಯಕ್ಕೆ ಧುಮುಕಿದ ರುದ್ರಪ್ಪ ಮಾನಪ್ಪ ಲಮಾಣಿ, 1985 ರಿಂದ 89ರವರೆಗೆ ಜಿಲ್ಲಾ ಪರಿಷತ್ನ ಸದಸ್ಯರಾಗಿ ಆಯ್ಕೆಯಾಗಿದ್ದರು. 1990 ರಿಂದ 1994ರವರೆಗೂ ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತರಾಗಿ ದುಡಿದ ರುದ್ರಪ್ಪ 1994ರಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟದ ಪರೀಕ್ಷೆಗೆ ಇಳಿದಿದ್ದರು. ಆದರೆ, ತಾವೂ ಸ್ಪರ್ಧಿಸಿದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ರುದ್ರಪ್ಪ ಲಮಾಣಿಗೆ ಸೋಲಾಯಿತು.
1999ರಲ್ಲಿ ಮತ್ತೆ ಬ್ಯಾಡಗಿ ಕ್ಷೇತ್ರದಲ್ಲಿ ಸ್ಪರ್ಧಿಸಿದ ಅವರು ನೆಹರು ಓಲೇಕಾರ್ ವಿರುದ್ಧ ಸುಮಾರು 18 ಸಾವಿರ ಮತಗಳಿಂದ ಗೆಲುವು ಸಾಧಿಸಿದರು. 2004ರಲ್ಲಿ ಮರು ಆಯ್ಕೆ ಬಯಸಿ ಬ್ಯಾಡಗಿಯಿಂದ ಸ್ಪರ್ಧಿಸಿದ್ದ ಲಮಾಣಿ, ಓಲೇಕಾರ್ ವಿರುದ್ಧ ಸೋಲು ಅನುಭವಿಸಿದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಸ್ಪರ್ಧಿಸಿದ ರುದ್ರಪ್ಪ ಲಮಾಣಿ, 2013 ಹಾಗೂ 2023ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಮತ್ತು ಮುಜರಾಯಿ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ರುದ್ರಪ್ಪ ಲಮಾಣಿ ಸಾಧನೆಗಳು:
ತುಂಗಭದ್ರಾ ನದಿಯಿಂದ ಪೈಪ್ಲೈನ್ ಮೂಲಕ ನೀರು ತಂದು ಬ್ಯಾಡಗಿ ತಾಲೂಕಿನ ಹಾಗೂ ರಾಣೇಬೆನ್ನೂರು ತಾಲೂಕಿನ ಕೆಲವು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿರುವ ರುದ್ರಪ್ಪ ಲಮಾಣಿ, ಗುಡ್ಡದ ಮಲ್ಲಾಪುರದ 13 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಬ್ಯಾಡಗಿಯ ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಯ ಅಭಿವೃದ್ಧಿ ಸೇರಿ ಎಪಿಎಂಸಿ ಸಂಕೀರ್ಣ ಹಾಗೂ ಕ್ರೀಡಾಂಗಣಗಳ ನಿರ್ಮಾಣ ಮಾಡಿದ್ದಾರೆ.
ಇದಲ್ಲದೇ ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಯತ್ನ, ಹಾವೇರಿ ನಗರದ ಸ್ಲಮ್ಗಳ ಅಭಿವೃದ್ಧಿ ಸೇರಿ ಅನೇಕ ಕಾರ್ಯ ಮಾಡಿದ್ದಾರೆ. ಹೊನ್ನಾಳಿ ತಾಲೂಕಿನ ಸುರಗೊಂಡನಕೊಪ್ಪದ ಸಂತ ಶ್ರೀ ಸೇವಾಲಾಲ್ ಜನ್ಮಸ್ಥಾನ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿ, ಸಂತ ಸೇವಾಲಾಲ್ ಜನ್ಮಸ್ಥಳದ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಕಾರಣವಾಗಿದ್ದಾರೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರತಿಭಟನೆ!
ಕಾಂಗ್ರೆಸ್ ಪಕ್ಷದಲ್ಲಿ ಬಂಜಾರ ಸಮುದಾಯದ ಏಕೈಕ ಶಾಸಕರಾಗಿರುವ ರುದ್ರಪ್ಪ ಲಮಾಣಿಗೆ ಈ ಬಾರಿ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿತ್ತು. ಅದಲ್ಲದೇ ಹಾವೇರಿ ಜಿಲ್ಲೆಯಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದರು ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿದ್ದಿಲ್ಲ. ಈ ಹಿನ್ನೆಲೆ ರುದ್ರಪ್ಪ ಲಮಾಣಿ ಸೇರಿ ಐದು ಶಾಸಕರು ಪ್ರಮಾಣ ವಚನವನ್ನು ಬಹಿಷ್ಕರಿಸಿದ್ದರು.