ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ದಿನಗಣನೆ ಶುರುಮಾಗಿದೆ. ಮನೆಯ ಹೆಂಗಳೆಯರು ಹಬ್ಬದ ತಯಾರಿಯಲ್ಲಿದ್ದಾರೆ. ಈ ನಡುವೆ ಪ್ರತಿಷ್ಟಾಪಿಸಲ್ಪಡುವ ಲಕ್ಷ್ಮಿಗೆ ಚೆಂದವಾಗಿ ಸೀರೆಯನ್ನೂ ಈ ಹಬ್ಬದಂದು ಉಡಿಸಲಾಗುತ್ತದೆ. ಸರಳವಾಗಿ ಸೀರೆ ಉಡಿಸುವ ವಿಧಾನ ಹೀಗಿದೆ.
- ಲಕ್ಷ್ಮಿಯನ್ನು ಎಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದು ಅಂದುಕೊಂಡಿದ್ದೇವೋ ಆ ಜಾಗವನ್ನು ಗೋಮೂತ್ರದಿಂದ ಶುದ್ಧ ಮಾಡಬೇಕು.
- ನಂತರ ಕೂರಿಸುವ ಟೇಬಲ್ ಅನ್ನು ರಂಗೋಲಿಯಿಂದ ಅಲಂಕರಿಸಬೇಕು.
- ರಂಗೋಲಿ ಮಧ್ಯೆ ಸ್ವಸ್ಥಿಕ್ ಚಿಹ್ನೆ ಇಡಿ, ರಂಗೋಲಿ ಹಾಕಲು ಅಕ್ಕಿ ಹಿಟ್ಟು ಬಳಸಬಹುದು.
- ಈಗ ದೇವಿಗೆ ಉಡಿಸಲು ಇಟ್ಟ ಸೀರೆ ಬ್ಲೌಸ್ ಪೀಸ್ ತೆಗೆದುಕೊಂಡು ಅದರ ಎರಡು ಕೈಗಳನ್ನು ಮೊದಲು ರೆಡಿ ಮಾಡಿಕೊಳ್ಳಬೇಕು.
ಬ್ಲೌಸ್ ಪೀಸ್ನ ಎರಡು ಬದಿಗೆ ಪೇಪರ್ ಪೀಸ್ ಹಾಕಿ, ನಂತರ ನಿಧಾನಕ್ಕೆ ಬ್ಲೌಸ್ ಪೀಸ್ ಅನ್ನು ಮಡಚಬೇಕು. ಹೀಗೆ ಮಾಡಿದರೆ ಬ್ಲೌಸ್ ಸ್ಟಿಫ್ ಆಗಿರುತ್ತದೆ. ಅದೇ ಬಟ್ಟೆಯನ್ನು ಒಳಗೆ ಸೇರಿಸಿ ಪಿನ್ ಹಾಕಿ. ಹೀಗೆ ಮಾಡಿದರೆ ದೇವಿಯ ಎರಡು ಕೈಗಳು ಸಿದ್ಧವಾಗುತ್ತದೆ. ಬಟ್ಟೆಯ ಮಧ್ಯಭಾಗದಲ್ಲಿ ನ್ಯೂಸ್ ಪೇಪರ್ ಇಡದ ಕಾರಣ ಅದು ಖಾಲಿನೇ ಇರುತ್ತದೆ.
ಟೇಬಲ್ ಮೇಲೆ ಮಡಿ ವಸ್ತ್ರ ಇಟ್ಟು, ಅದರ ಮೇಲೆ ಬಾಳೆಲೆ ಹಾಕಬೇಕು, ಬಾಳೆಲೆ ತುದಿ ದೇವಿಯ ಬಲಭಾಗದಲ್ಲಿರಬೇಕು. ಅದರ ಮೇಲೆ ಅಕ್ಕಿಯನ್ನು ಹಾಕಿ ಬಿಂದಿಗೆಯನ್ನು ಇಡಬೇಕು. ಒಂದು ಸ್ವಲ್ಪ ದೊಡ್ಡ ಬಿಂದಿಗೆ ಅದರ ಮೇಲೆ ಸ್ವಲ್ಪ ಪುಟ್ಟದಾದ ಬಿಂದಿಗೆ ಇಡಿ. ಮೇಲಿನ ಕಳಶಕ್ಕೆ ನಿಮ್ಮ ಪದ್ಧತಿಯಂತೆ ಸಿರಿಧಾನ್ಯ ಹಾಕಿ. ಎರಡು ಬಿಂದಿಗೆ ಬೀಳದಂತೆ ಗಮ್ಟೇಪ್ ಹಾಕಬಹುದು.
ಈಗ ಮೇಲಿನ ಬಿಂದಿಗೆಯ ಕೊರಳಿಗೆ ಒಂದು ಸ್ಕೇಲ್ ಕಟ್ಟಿ, ಈಗ ದೇವಿಗೆ ಉಡಿಸಬೇಕಾದ ಸೀರೆ ತೆಗೆದುಕೊಂದು ಅದರ ಸೆರಗು ರೆಡಿ ಮಾಡಿ. ನಂತರ ಒಂದೇ ರೀತಿಯ ಅಳತೆಯಲ್ಲಿ ನೆರಿಗೆ ತೆಗೆಯಿರಿ. ನೆರಿಗೆಯಾದ ಮೇಲೆ ಪಿನ್ ಹಾಕಿ, ನೆರಿಗೆಯ ಮೇಲೆ ಮತ್ತು ಕೆಳಭಾಗದಲ್ಲಿ ಪಿನ್ ಹಾಕಿ. ನಂತರ ಸೀರೆಯನ್ನು ಸಮಭಾಗವಾಗಿ ಮಡಚಿ ನಂತರ ಸ್ವಲ್ಪ ಸಡಿಲವಾಗಿ ದರದಿಂದ ಭದ್ರವಾಗಿ ಕಟ್ಟಿ. ಈಗ ಸೆರಗು ಹಾಕಿ. ಮಧ್ಯ, ಮಧ್ಯ ಪಿನ್ಗಳನ್ನು ಹಾಕಿ.
ಈಗ ನೆರಿಗೆ ತೆಗೆದಿರುವ ಸೀರೆಯ ಭಾಗವನ್ನು ಕೆಳಗಿನ ಬಿಂದಿಗೆಯ ಬಾಯಿಗೆ ಕಟ್ಟಿ . ಈಗ ಸಿದ್ಧ ಮಾಡಿಟ್ಟುಕೊಂಡಿದ್ದ ಬ್ಲೌಸ್ ಪೀಸ್ ತೆಗೆದು, ಅದನ್ನು ಮೇಲಿನ ಬಿಂದಿಗೆಗೆ ಕಟ್ಟಿದ ಸ್ಕೇಲ್ಗೆ ಮೆಲ್ಲನೆ ಪಿನ್ ಮಾಡಿ. ನಂತರ ಸೆರಗನ್ನು ತೆಗೆದು ಅದನ್ನು ಮುಂದೆ ಭಾಗಕ್ಕೆ ಹಾಕಿ. ನೆರಿಗೆಯನ್ನು ಹರಡಿ, ಸೊಂಟದ ಪಟ್ಟಿ ಹಾಕಿ, ದೇವಿಯ ಮುಖವಾಡ ಇಟ್ಟು, ಕೈಗಳಿಗೆ ಬಳೆ ಹಾಗೂ ಆಭರಣಗಳಿಂದ ದೇವಿಯನ್ನು ಅಲಂಕರಿಸಿ ಕೈಗಳಿಗೆ ಕಮಲ ಹೂಗಳನ್ನು ಇಟ್ಟರೆ ತುಂಬಾ ಆಕರ್ಷಕವಾಗಿ ಕಾಣುವುದು.