ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರಿಗೆ ಸೇರಿದ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಜಯಲಲಿತಾರವರ ಕಾನೂನಾತ್ಮಕ ವಾರಸುದಾರರಾದ ಜೆ. ದೀಪ್ ಅವರು ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿ, ಜಯಲಲಿತಾರಿಗೆ ಸಂಬಂಧಿಸಿದ ಎಲ್ಲಾ ಆಭರಣಗಳು ಹಾಗೂ ಸೀರೆಗಳನ್ನು ತಮಗೇ ಹಸ್ತಾಂತರಿಸಬೇಕು ಎಂದು ಮನವಿ ಸಲ್ಲಿಸಿದ್ದರು.
ಅವರ ಮನವಿಯನ್ನು ಪುರಸ್ಕರಿಸಿರುವ ಕರ್ನಾಟಕ ಹೈಕೋರ್ಟ್, ಮಾ. 6 ಹಾಗೂ 7ರಂದು ನಡೆಯಬೇಕಿದ್ದ ಆಭರಣಗಳ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿದೆ. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ಆಕ್ಷೇಪಣೆಗಳಿದ್ದರೆ ಅದನ್ನು ಸಲ್ಲಿಸಲು ಕಾಲಾವಕಾಶ ನೀಡಿದೆ ಎಂದು ಹೇಳಲಾಗಿದೆ.
ಏನಿದು ಪ್ರಕರಣ?
ಜಯಲಲಿತಾರಿಗೆ ಸಂಬಂಧಿಸಿದ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ಕರ್ನಾಟಕದಲ್ಲೇ ನಡೆದಿತ್ತು. ಆ ಹಿನ್ನೆಲೆಯಲ್ಲಿ ಜಯಲಲಿತಾ ಅವರ ನಿವಾಸದಲ್ಲಿ ನಡೆದ ಐಟಿ ದಾಳಿಯ ವೇಳೆ ಸಂಗ್ರಹಿಸಲಾಗಿದ್ದ ಎಲ್ಲಾ ಆಭರಣಗಳನ್ನು, ಸೀರೆಗಳನ್ನು ತಂದು ಕರ್ನಾಟಕದಲ್ಲಿ ಇಡಲಾಗಿತ್ತು. ಈ ಪ್ರಕರಣ ಆನಂತರ ಸುಪ್ರೀಂ ಕೋರ್ಟ್ ನಲ್ಲೂ ನಡೆದಿತ್ತು. 2016ರಲ್ಲಿ ಜಯಲಲಿತಾ ಅವರು ನಿಧನರಾದ ನಂತರ ಸುಪ್ರೀಂ ಕೋರ್ಟ್,
ಜಯಲಲಿತಾರನ್ನು ದೋಷಮುಕ್ತರನ್ನಾಗಿಸಿತು. ಆ ಹಿನ್ನೆಲೆಯಲ್ಲಿ ಜಯಲಲಿತಾರಿಗೆ ಸೇರಿದ್ದ ಆಭರಣಗಳು ಹಾಗೂ ಸೀರೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯ ಫೆ. 20ರಂದು ಆದೇಶಿಸಿತ್ತು. ಈಗ, ಅದೇ ಆದೇಶಕ್ಕೆ ಜಯಲಲಿತಾರ ವಾರಸುದಾರರಾದ ಜೆ. ದೀಪಾ ಅವರು ತಡೆಯಾಜ್ಞೆ ತಂದಿದ್ದಾರೆ.