ಮುಂಬೈ: 15 ವರ್ಷದ ಅಪ್ರಾಪ್ತ ಅತ್ಯಾಚಾರ (Rape) ಸಂತ್ರಸ್ತೆಯ 28 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಲು ಬಾಂಬೆ ಹೈಕೋರ್ಟ್ (Bombay Highcourt) ಔರಂಗಬಾದ್ ಪೀಠ ನಿರಾಕರಿಸಿದೆ. 28 ವಾರಗಳ ಹಂತದಲ್ಲಿ ಬಲವಂತವಾಗಿ ಹೆರಿಗೆ ಮಾಡಿಸಿದರೆ ಮಗು ಜೀವಂತವಾಗಿ ಜನಿಸುತ್ತದೆ.
ನವಜಾತ ಶಿಶುವಿಗೆ ಆರೈಕೆಯ ಅಗತ್ಯವಿರುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಗರ್ಭಪಾತಕ್ಕೆ (Abortion) ಅನುಮತಿ ನೀಡಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಧೀಶರಾದ ಆರ್ವಿ ಘುಗೆ (R.V.Ghuge) ಮತ್ತು ವೈಜಿ ಖೋಬ್ರಗಡೆ (Y.G.Khobragade) ಅವರ ಪೀಠವು ಜೂನ್ 20ರಂದು ಈ ಆದೇಶವನ್ನು ನೀಡಿದೆ.
ಅತ್ಯಾಚಾರಕ್ಕೆ ಒಳಗಾದ ಬಾಲಕಿಯ 28 ವಾರಗಳ ಗರ್ಭಪಾತಕ್ಕೆ ಅನುಮತಿ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. 2023ರ ಫೆಬ್ರವರಿಯಲ್ಲಿ ತನ್ನ ಮಗಳು ನಾಪತ್ತೆಯಾಗಿದ್ದು, 3 ತಿಂಗಳ ಬಳಿಕ ರಾಜಸ್ಥಾನದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಪತ್ತೆಯಾಗಿದ್ದಾಳೆ ಎಂದು ಮಹಿಳೆ ಮನವಿಯಲ್ಲಿ ತಿಳಿಸಿದ್ದಾರೆ.
ಘಟನೆಯ ಕುರಿತು ವ್ಯಕ್ತಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕ ಮಗು ಜೀವಂತವಾಗಿ ಜನಿಸುತ್ತದೆ ಮತ್ತು ನವಜಾತ ಶಿಶುವನ್ನು ಆರೈಕೆ ಮಾಡಬೇಕಾಗುತ್ತದೆ. ಅಲ್ಲದೇ ಸಂತ್ರಸ್ತೆಗೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಕೋರ್ಟ್ ಗಮನಕ್ಕೆ ತಂದಿದ್ದರು.