ಬೆಂಗಳೂರು: ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ಆದೇಶವನ್ನು ಬೆಂಗಳೂರಿನ ಹೈಕೋರ್ಟ್ ನ ದ್ವಿ ಸದಸ್ಯ ಪೀಠ ಎತ್ತಿ ಹಿಡಿದಿದೆ. ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರಿದ್ದ ವಿಭಾಗೀಯ ಪೀಠ ಗುರುವಾರ ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು. ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರ ವಿರುದ್ಧ ಕೇವಲ 6 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್ನ ಗಾಯಿತ್ರಿ ಶಾಂತೇಗೌಡ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಸಂವಿಧಾನದ ಕಲಂ 243(6) ಮತ್ತು ಕೆಎಂಸಿ ಕಾಯ್ದೆ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲೂ ಸಹ ಮತದಾನ ಮಾಡುವ ಹಕ್ಕಿಲ್ಲ. ಅವರು ಸಲಹೆ-ಸೂಚನೆಗಳನ್ನು ನೀಡಬಹುದಷ್ಟೇ. ಹಾಗಾಗಿ ವಿಧಾನಪರಿಷತ್ ಚುನಾವಣೆಯಲ್ಲೂ ಸಹ ಮತದಾನದ ಹಕ್ಕು ಇರುವುದಿಲ್ಲ ಎಂದು ಆದೇಶ ನೀಡಿತ್ತು. ಈ ಆದೇಶವನ್ನು ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ.