ಬೆಂಗಳೂರು: ಸಚಿವರ ಪಟ್ಟಿ ಅಂತಿಮಕ್ಕೆ ಸರ್ಕಸ್ ನಡೆಯುತ್ತಿದ್ದು, ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಇಂದು ಮತ್ತೆ ದೆಹಲಿಗೆ ತೆರಳಲಿದ್ದಾರೆ. ಸಚಿವರ ಆಯ್ಕೆಗೆ ಇಂದು ದೆಹಲಿಯಲ್ಲಿ ನಾಯಕರ ಕಸರತ್ತು ನಡೆಸಲಿದ್ದಾರೆ. ಸಂಪುಟ (Cabinet) ರಚನೆಯ ಬಗ್ಗೆ ಹೈವೋಲ್ಟೇಜ್ ಮೀಟಿಂಗ್ ಇದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದಾರೆ.
ಕರ್ನಾಟಕ ಸಿಎಂ ಗಾದಿಗಾಗಿ ಕಳೆದ 4-5 ದಿನಗಳಿಂದ ದೆಹಲಿಯಲ್ಲಿ ಭಾರೀ ಹೈಡ್ರಾಮ ನಡೆದಿತ್ತು. ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಪಟ್ಟು ಹಿಡಿದಿದ್ದರು. ಹೈಕಮಾಂಡ್ ಎಷ್ಟು ಮನವೊಲಿಸಿದರೂ ಬಗ್ಗಿರಲಿಲ್ಲ. ಕೆಲ ಷರತ್ತುಗಳೊಂದಿಗೆ ಕೊನೆಗೂ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಲು ಡಿಕೆಶಿ ಒಪ್ಪಿಗೆ ಸೂಚಿಸಿದರು. ತಾವು ಡಿಸಿಎಂ ಪಟ್ಟ ಪಡೆದರು.
ಅತ್ತ ಸಿದ್ದರಾಮಯ್ಯ ಸಿಎಂ ಎಂಬುದು ಖಚಿತವಾಗುತ್ತಿದ್ದಂತೆ ಇತ್ತ ಡಾ. ಪರಮೇಶ್ವರ್ (Dr G Parameshwar) ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರ ಮುಂದೆ ಸರ್ಕಾರ ರಚನೆ ಕುರಿತು ಮಾಹಿತಿ ನೀಡಿದರು. ಇದೇ ಮೇ 20 ರಂದು ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ನಾಯಕರು ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನೂ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.