ಬೆಂಗಳೂರು: ಐದು ಗ್ಯಾರಂಟಿ ಘೋಷಣೆಗಳ ಜಾರಿ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಬುಧವಾರ ಡಿಸಿಎಂ ಹಾಗೂ ಸಚಿವರುಗಳ ಜೊತೆಗೆ ಮಹತ್ವದ ಸಭೆಯನ್ನು ನಡೆಸಲಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಗ್ಯಾರಂಟಿ ಘೋಷಣೆ ಜಾರಿ ಮಾಡುವ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.
ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2000, ಹತ್ತು ಕೆಜಿ ಅಕ್ಕಿ ಉಚಿತ ಹಾಗೂ ಪದವಿ ಮತ್ತು ಡಿಪ್ಲೊಮಾ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಐದು ಘೋಷಣೆಯನ್ನು ಕಾಂಗ್ರೆಸ್ ಮಾಡಿತ್ತು.
ಮೊದಲ ಕ್ಯಾಬಿನೆಟ್ ನಲ್ಲಿ ಈ ಪಂಚ ಘೋಷಣೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಆದರೆ ಜಾರಿ ವಿಳಂಬ ಆಗುತ್ತಿರುವ ನಿಟ್ಟಿನಲ್ಲಿ ಬಿಜೆಪಿಗೂ ಗ್ಯಾರಂಟಿ ಘೋಷಣೆಗಳು ರಾಜಕೀಯ ಅಸ್ತ್ರಗಳಾಗಿದ್ದವು.
ಕೂಡಲೇ ಗ್ಯಾರಂಟಿ ಘೋಷಣೆಗಳನ್ನು ಜಾರಿಗೆ ತರಬೇಕು ಎಂಬ ಒತ್ತಾಯವನ್ನು ಬಿಜೆಪಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಚಿವರ ಜೊತೆಗೆ ಚರ್ಚೆ ನಡೆಸಲಿದ್ದಾರೆ.