ಅಫ್ಘಾನಿಸ್ತಾನ ನಿತ್ಯ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು ಇದರಿಂದ ಜನ ಬೇಸತ್ತು ಹೋಗಿದ್ದಾರೆ. ಇದೀಗ ಹೆರಾತ್ ಪ್ರಾಂತ್ಯದಲ್ಲಿ ವಾಸಿಸುವವರಿಗೆ ತಾಲಿಬಾನ್ ಮತ್ತೊಂದು ಆದೇಶವನ್ನು ಹೊರಡಿಸಿದ್ದು, ಇದು ತೆರೆದ ರೆಸ್ಟೋರೆಂಟ್ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.
ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ತಾಲಿಬಾನ್ ಲಿಂಗ ಪ್ರತ್ಯೇಕತೆಯ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಪುರುಷರು ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಕುಟುಂಬ ಸದಸ್ಯರೊಂದಿಗೆ ತಿನ್ನಲು ಅನುಮತಿ ನಿರಾಕರಿಸಿದೆ. ಅಲ್ಲದೆ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಉದ್ಯಾನವನಕ್ಕೆ ಹೋಗುವುದನ್ನು ನಿಷೇಧಿಸಿದೆ.
ಉದ್ಯಾನಗಳು ಮತ್ತು ಹಸಿರು ಪ್ರದೇಶಗಳನ್ನು ಹೊಂದಿರುವ ಯಾವುದೇ ರೆಸ್ಟೋರೆಂಟ್ಗೆ ಯಾವುದೇ ಮಹಿಳೆ ಅಥವಾ ಕುಟುಂಬಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಆ ಆದೇಶ ಹೇಳುತ್ತದೆ. ಇಂತಹ ಸ್ಥಳಗಳಲ್ಲಿ ಪುರುಷರು ಮತ್ತು ಮಹಿಳೆಯರು ಭೇಟಿಯಾಗುತ್ತಾರೆ ಎಂಬ ಧಾರ್ಮಿಕ ಸಂಘಟನೆಗಳ ಸದಸ್ಯರು ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಇತ್ತೀಚೆಗೆ ಶಿಕ್ಷಣಕ್ಕೆ ನಿರ್ಬಂಧ ಹೇರಿದ್ದು ಆರನೇ ತರಗತಿಯ ನಂತರ ಹುಡುಗಿಯರು ಶಾಲೆಗೆ ಹೋಗುವುದನ್ನು ಮತ್ತು ಮಹಿಳೆಯರು ವಿಶ್ವವಿದ್ಯಾಲಯಕ್ಕೆ ಹೋಗುವುದನ್ನು ನಿಷೇಧಿಸಿತು. ಇದೀಗ ಪಾರ್ಕ್ ಮತ್ತು ಜಿಮ್ಗೆ ಹೋಗುವುದಕ್ಕೂ ನಿಷೇಧ ಹೇರಲಾಗಿದೆ.