ಕೈಗಾ ಪರಮಾಣು ವಿದ್ಯುತ್ ಸ್ಥಾವರದ ಕಾಲುವೆಗಳೂ ಕ್ರಮಬದ್ಧವಾಗಿಲ್ಲ. ಕಾರಣ ಭೂಕುಸಿತ ಸಂಭವಿಸುವ ಬಗ್ಗೆ ಆಗಲೇ ಎಚ್ಚರಿಕೆ ನೀಡಿದ್ದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಮಾತಿಗೆ ಕಿವಿಕೊಡುವ ಗೋಜಿಗೆ ಹೋಗಿಲ್ಲ,” ಎಂದು ಸಚಿವ ಕೃಷ್ಣ ಬೈರೇಗೌಡ ಆಕ್ಷೇಪಿಸಿದರು.
ಅಂಕೋಲ ಸಮೀಪದ ಭೂ ಕುಸಿತದ ಘಟನೆ ಮತ್ತು ರಕ್ಷಣಾ ಕಾರ್ಯಾಚರಣೆ ಬಗ್ಗೆ ಕುರಿತು ವಿಧಾನ ಸಭೆಗೆ ಮಾಹಿತಿ ನೀಡುವ ವೇಳೆ,
“ಕಳೆದ ವರ್ಷ ಅತಿವೃಷ್ಟಿಯ ಸಂದರ್ಭದಲ್ಲೇ ನಾನು ಈ ಭಾಗಕ್ಕೆ ತೆರಳಿದ್ದೆ. ರಾಷ್ಟ್ರೀಯ ಹೆದ್ದಾರಿಗಳು ವೈಜ್ಞಾನಿಕವಾಗಿ ನಿರ್ಮಾಣವಾಗಿಲ್ಲ ಎಂಬುದನ್ನು ಮನಗಂಡೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಮಾತನ್ನು ಕೇಳುವುದೇ ಇಲ್ಲ. ನಾವು ಏನೇ ಹೇಳಿದರೂ ನಮ್ಮ ಕೇಂದ್ರ ಕಚೇರಿ ದೆಹಲಿಯಲ್ಲಿದೆ, ಅಲ್ಲಿಗೆ ಪತ್ರ ಬರೆಯುತ್ತೇವೆ ಎಂದಷ್ಟೇ ಹೇಳಿ ಕೈ ತೊಳೆದುಕೊಳ್ಳುತ್ತಾರೆ,” ಎಂದು ದೂರಿದರು.
ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಪ್ರಾಧಿಕಾರದ ಅಧಿಕಾರಿಗಳನ್ನು ತಕ್ಷಣವೇ ಕರೆಸಿ ಮಾತನಾಡಲಾಗುವುದು. ಮುಖ್ಯ ಕಾರ್ಯದರ್ಶಿ ಮೂಲಕ ಪತ್ರ ಬರೆಯಲಾಗುವುದು. ಮುಂದಿನ ದಿನಗಳಲ್ಲಿ ಇಂಥ ಅಪಘಾತಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.
ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು 7 ಜನ ಮೃತಪಟ್ಟಿರುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮೃತಪಟ್ಟವರ ಕುಟುಂಬಕ್ಕೆ ತಕ್ಷಣವೇ 5 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.