ಬೆಂಗಳೂರು ;- ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ ಹೈಕೋರ್ಟ್ ವಜಾಗೊಳಿಸಿದೆ
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜಿ. ಬಸವರಾಜ ಅವರಿದ್ದ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ
ಆರ್ಜಿದಾರರು ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಸದಸ್ಯನಾಗಿದ್ದಾನೆಯೇ ಇಲ್ಲವೇ ಎಂಬುದರ ಕುರಿತು ಈ ಹಂತದಲ್ಲಿ ಪರಿಗಣಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಯುಎಪಿಎ ಕಾಯಿದೆಯಡಿ ಮಾಡಲಾದ ಆರೋಪಗಳು ನಿಸ್ಸಂದೇಹವಾಗಿ ರಾಷ್ಟ್ರದ ವಿರುದ್ಧದ ಅಪರಾಧಗಳಾಗಿದ್ದು, ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುತ್ತವೆ ಎಂದಿದೆ.
ಜೊತೆಗೆ, ಇದು ಸಮಾಜದ ವಿರುದ್ಧದ ಅಪರಾಧವೂ ಹೌದು. ಈ ಪ್ರಕರಣದ ವಾಸ್ತವಾಂಶಗಳು ವಿವರಿಸುವಂತೆ ಕೋಮುವಾದಿಗಳಂತೆ ಕಂಡುಬರುವ ಎಲ್ಲ ಆರೋಪಿಗಳಿಗೆ ಮೃತ ಹರ್ಷನ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಹಿಂದೂಗಳಲ್ಲಿ ಭಯ ಬಿತ್ತುವ ಉದ್ದೇಶದಿಂದ ಹತ್ಯೆಗೆ ಹರ್ಷನನ್ನು ಆಯ್ದುಕೊಳ್ಳಲಾಗಿದೆ. ಹೀಗಾಗಿ ಮೇಲ್ಮನವಿದಾರನ ವಯಸ್ಸು ಚಿಕ್ಕದು, ಅತನಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದು ಆತನಿಗೆ ಜಾಮೀನು ನೀಡಲು ಪರಿಗಣಿಸಬೇಕಾದ ಆಧಾರವಲ್ಲ ಎಂದ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.